4 ತಿಂಗಳಿ೦ದ ಅತಿಥಿ ಉಪನ್ಯಾಸಕರಿಗಿಲ್ಲ ವೇತನ

3 Dwd 1
Published on

ಮಂಜುನಾಥ ಎಸ್. ಅಂಗಡಿ ಧಾರವಾಡ

ಸರ್ಕಾರಿ ಆದರ್ಶ ವಿದ್ಯಾಲಯಗಳನ್ನು ದ್ವಿತೀಯ ಪಿಯುಸಿವರೆಗೆ ಉನ್ನತೀಕರಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಿಯು ವಾಣಿಜ್ಯ ಮತ್ತು ವಿಜ್ಞಾನ ತರಗತಿಗಳು ಆರಂಭಗೊAಡಿವೆ. ಆರಂಭಿಕ ವಿಘ್ನ ಎಂಬAತೆ ರಾಜ್ಯಾದ್ಯಂತ ಈ ಕಾಲೇಜುಗಳಲ್ಲಿ ಕಾರ್ಯನಿರ್ವಹಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 4 ತಿಂಗಳಿ0ದ ವೇತನ ಬಿಡುಗಡೆಯಾಗಿಲ್ಲ.

6ರಿಂದ 10ನೇ ತರಗತಿವರೆಗಿನ ಸರ್ಕಾರಿ ಆದರ್ಶ ವಿದ್ಯಾಲಯಗಳಿಗೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂಥ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಉತ್ತಮ ಕಟ್ಟಡ, ಬೋಧಕರನ್ನು ಕಲ್ಪಿಸಲಾಗಿದೆ. ಅಲ್ಲಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉನ್ನತ ಸಾಧನೆಗೈದು ಆಯಾ ಜಿಲ್ಲೆಗೆ ಹೆಸರು ತಂದಿದ್ದಾರೆ. ಕಟ್ಟಡ ಮತ್ತು ಇರುವ ಮೂಲ ಸೌಕರ್ಯಗಳನ್ನೇ ಬಳಸಿ ದ್ವಿತೀಯ ಪಿಯುಸಿವರೆಗೆ ವಿಸ್ತರಿಸಲಾಗಿದೆ. 2024- 25ನೇ ಸಾಲಿನಲ್ಲಿ ತಯಾರಿ ಮಾಡಿ ಪ್ರಸಕ್ತ ಸಾಲಿನಿಂದ ಆಂಗ್ಲ ಮಾಧ್ಯಮ ಪಿಯು ವಾಣಿಜ್ಯ ಮತ್ತು ವಿಜ್ಞಾನ ತರಗತಿಗಳು ಆರಂಭಿಸಲಾಗಿದೆ. ಬೋಧನೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿರುವ ಸರ್ಕಾರ, ವೇತನಾನುದಾನ ನೀಡುವುದನ್ನೇ ಮರೆತಿದೆ.

ಆದರ್ಶ ವಿದ್ಯಾಲಯಗಳ ಪಿಯು ಕಾಲೇಜುಗಳಿಗೆ ಅರ್ಹ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ಎಂಎ ಬಿ.ಎಡ್ ಪದವಿ ಕಡ್ಡಾಯಗೊಳಿಸಿ ನೇಮಿಸಿಕೊಳ್ಳಲಾಗಿದೆ. 14,000 ರೂಪಾಯಿ ಗೌರವ ವೇತನ ನಿಗದಿಪಡಿಸಲಾಗಿದೆ. ರಾಜ್ಯಾದ್ಯಂತ 74 ಕಾಲೇಜುಗಳಲ್ಲಿ 814 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬೋಧನಾ ಅನುಭವ ಪರಿಗಣಿಸಿದ್ದಲ್ಲದೆ, ಬೋಧನಾ ತರಗತಿ (ಡೆಮೋ ಕ್ಲಾಸ್) ನಡೆಸಿ ನೇಮಕ ಮಾಡಲಾಗಿದೆ. ಸಮಯ ಹೊಂದಿಸಿಕೊ0ಡು 2- 3 ಖಾಸಗಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಅದನ್ನು ಬಿಟ್ಟು ಆದರ್ಶ ವಿದ್ಯಾಲಯ ಸೇರಿದ್ದಾರೆ. ಇಲ್ಲಿ ವಾರದ 6 ದಿನ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸಬೇಕು. ಹೀಗಾಗಿ ಬೇರೆ ಖಾಸಗಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವುದು ಕಷ್ಟ.

* ನಿಗದಿಯಾಗದ ಲೆಕ್ಕಶೀರ್ಷಿಕೆ:

ಸರ್ಕಾರ ಹೊಸದಾಗಿ ಆದರ್ಶ ಪಿಯು ಕಾಲೇಜುಗಳನ್ನೇನೋ ಆರಂಭಿಸಿದೆ. ಆದರೆ, ಅತಿಥಿ ಉಪನ್ಯಾಸಕರಿಗೆ ವೇತನ ನೀಡುವ ಲೆಕ್ಕಶೀರ್ಷಿಕೆ ನಿಗದಿಪಡಿಸಿಲ್ಲ ಎನ್ನಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಗೆ ವೇತನ ಅನುದಾನ ಬಿಡುಗಡೆ ಮಾಡದಿರುವುದರಿಂದ `ಅತಿಥಿ'ಗಳು ಪರಿತಪಿಸುವಂತಾಗಿದೆ. ಸಾಲು ಸಾಲು ಹಬ್ಬಗಳು ಬಂದಿದ್ದು, ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಅತಿಥಿ ಉಪನ್ಯಾಸಕರು ಗೋಳು ತೋಡಿಕೊಂಡಿದ್ದಾರೆ. ಈ ಕುರಿತು ಉಪ ನಿರ್ದೇಶಕರನ್ನು ವಿಚಾರಿಸಿದರೆ ಸರ್ಕಾರದಿಂದ ಅನುದಾನ ಬಂದಿಲ್ಲ ಎಂಬ ಉತ್ತರ ಸಿಗುತ್ತಿದೆ.

10ನೇ ತರಗತಿವರೆಗೆ ಇದ್ದ ಆದರ್ಶ ವಿದ್ಯಾಲಯಗಳಲ್ಲಿ ಪಿಯುಸಿ ಶಿಕ್ಷಣಕ್ಕಾಗಿ ಪಾಲಕರ ಬೇಡಿಕೆ ಇತ್ತು. ಹೀಗಾಗಿ ಸರ್ಕಾರ ಇರುವ ಕಟ್ಟಡ ಮತ್ತು ಮೂಲ ಸೌಕರ್ಯಗಳನ್ನೇ ಬಳಸಿ ಉನ್ನತೀಕರಿಸಲಾಗಿದೆ. ಪಿಯುಸಿ ವಾಣಿಜ್ಯ ಮತ್ತು ವಿಜ್ಞಾನ ಕೋರ್ಸ್ಗೆ ಖಾಸಗಿ ಕಾಲೇಜುಗಳನ್ನೇ ಅವಲಂಬಿಸುತ್ತಿದ್ದ ಪಾಲಕರಿಗೆ ಈ ಕಾಲೇಜುಗಳು ವರದಾನವಾಗಿವೆ. ಕಡಿಮೆ ಶುಲ್ಕ ಮತ್ತು ಗುಣಮಟ್ಟದ ಶಿಕ್ಷಣ ಸಿಗುವ ಕಾಲೇಜುಗಳ ಪ್ರವೇಶಾತಿಗೂ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದೆಲ್ಲವನ್ನು ಪರಿಗಣಿಸಿ ಹೊಸದಾಗಿ ಆರಂಭವಾದ ಆದರ್ಶ ವಿದ್ಯಾಲಯಗಳ ಪಿಯುಸಿ ತರಗತಿಗಳ `ಅತಿಥಿ' ಬೋಧಕರನ್ನು ಕಡೆಗಣಿಸಲಾಗುತ್ತಿದೆ. ರಾಜ್ಯಾದ್ಯಂತ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲೂ ಅತಿಥಿ ಉಪನ್ಯಾಸಕರಿದ್ದು, ಅವರಿಗೆ ನಿಯಮಿತವಾಗಿ ವೇತನ ಪಾವತಿಯಾಗುತ್ತಿದೆ.

ಮೊದಲಿದ್ದ ಕೆಲಸ ಬಿಟ್ಟು ಸರ್ಕಾರಿ ಆದರ್ಶ ವಿದ್ಯಾಲಯ ಸೇರಿದ್ದೇನೆ. 4 ತಿಂಗಳಿ0ದ ವೇತನ ನೀಡಿಲ್ಲ. ಇದರೊಂದಿಗೆ ಇನ್ನೊಂದು ಖಾಸಗಿ ಕಾಲೇಜು ಸೇರಲು ಅವಕಾಶವಿಲ್ಲ. ವೇತನವಿಲ್ಲದೆ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ.

- ಅತಿಥಿ ಉಪನ್ಯಾಸಕ

ಆದರ್ಶ ವಿದ್ಯಾಲಯಗಳಲ್ಲಿ ಹೊಸದಾಗಿ ಪಿಯು ಕಾಲೇಜುಗಳು ಆರಂಭವಾಗಿದ್ದರಿAದ ವೇತನ ಬಿಡುಗಡೆ ವಿಳಂಬವಾಗಿದೆ. ಅಗತ್ಯ ವೇತನ ಅನುದಾನ ಕೋರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ.

- ತೇಜಶ್ವಿನಿ ನಾರಾಯಣಕರ, ಡಿಡಿಪಿಯು ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net