

ಮೈಸೂರು: ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಿ ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂದು ಮಹಿಳಾ ಅತಿಥಿ ಉಪನ್ಯಾಸಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಮಹಿಳಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
2020-21ನೇ ಶೈಕ್ಷಣಿಕ ಸಾಲಿನಲ್ಲಿ 14,183 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 7,400 ಮಹಿಳೆಯರಿದ್ದಾರೆ. ಇವರಲ್ಲಿ ಶೇ.90ರಷ್ಟು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಅತಿಥಿ ಉಪನ್ಯಾಸಕರು ಶೋಷಣೆಗೆ ಒಳಗಾಗಿದ್ದು, ಉದ್ಯೋಗ ಭದ್ರತೆ ಇಲ್ಲದೆ, ಅರೆ ನಿರುದ್ಯೋಗಿಯಾಗಿ ಕಾಲ ಕಳೆಯ ಬೇಕಾಗಿದೆ ಎಂದು ಅಳಲು ತೋಡಿಕೊಂಡರು.
ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಅತಿಥಿ ಶಿಕ್ಷಕರನ್ನು, ಉಪನ್ಯಾಸಕರನ್ನು ಕಾಯಂಗೊಳಿಸಿ, ಉದ್ಯೋಗ ಭದ್ರತೆ ಒದಗಿಸಲಾಗಿದೆ. ಆದರೆ, ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಬರೀ ಭರವಸೆ ನೀಡುತ್ತಿದ್ದು, ಇದನ್ನು ನಂಬಿ ಕಾಯಂ ಆಗಬಹುದೆಂಬ ಕನಸಿನಲ್ಲಿ ಚಾತಕಪಕ್ಷಿಯಂತೆ ಕಾದು ಕುಳಿತಿದ್ದು, ಸಿಗುವ ಕಡಿಮೆ ಗೌರವಧನದಲ್ಲಿ ಸಂಸಾರ ನಡೆಸುವುದೇ ಕಷ್ಟವಾಗಿದೆ ಎಂದು ಸಮಸ್ಯೆಯನ್ನು ಹೇಳಿಕೊಂಡರು.
ಬೇಡಿಕೆಗಳು ಏನು?
ಸೇವೆಯಲ್ಲಿರುವ ಮತ್ತು ಕಾರ್ಯಭಾರದ ಕೊರತೆಯಿಂದ ಹೊರಗಿರುವ ಎಲ್ಲ ಅತಿಥಿ ಉಪನ್ಯಾಸಕರನ್ನು ಸೇವಾ ವಿಲೀನ ವ್ಯಾಪ್ತಿಗೆ ತಂದು ಕಾಯಂಗೊಳಿಸಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಹೆಚ್ಚುವರಿ ಕಾರ್ಯಭಾರಕ್ಕೆ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸ್ಥಾನಕ್ಕೆ ಅವೈಜ್ಞಾನಿಕವಾಗಿ ವರ್ಗಾವಣೆ ಅಥವಾ ನಿಯೋಜನೆ ಮಾಡುವುದನ್ನು ರದ್ದುಮಾಡಬೇಕು ಎಂದು ಆಗ್ರಹಿಸಿದರು
ಮುಖಂಡರಾದ ಡಾ.ಜಿ.ಶಾಮಲಾ, ಡಾ.ಸಿ.ಎಲ್.ದೀಪಶ್ರೀ, ಎನ್.ಎಂ.ಮಾನಸ, ಹರ್ಷಿತಾ, ತೊಳಸಮ್ಮ, ಎಚ್.ಎಂ.ಭಾಗ್ಯ, ಡಾ. ಎಂ.ಎಸ್.ಸಂಗೀತ, ಡಾ.ಆರ್.ಗಿರಿಜಾಂಬ, ಎಸ್.ಕೆ.ಸಂಕಲ್ಪ, ಎಂ.ಎಸ್.ಆಶಾ ಇನ್ನಿತರರು ಪ್ರತಿಭಟನೆಯಲ್ಲಿದ್ದರು.