ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಆಕ್ಷೇಪ: ಆದೇಶ ಹಿಂಪಡೆಯದಿದ್ದರೆ ಪ್ರತಿಭಟನೆಯ ಎಚ್ಚರಿಕೆ

03_02_Mdy_02(Athithi Upanyasakaru)
Published on

ಮಂಡ್ಯ: ರಾಜ್ಯ ಸರ್ಕಾರ ಶೈಕ್ಷಣಿಕ ವರ್ಷದ ಅವಧಿಯ ಮಧ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಆನ್‌ಲೈನ್ ಪ್ರಕ್ರಿಯೆ ಮೂಲಕ ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಹಾಲಿ ಇರುವವರ ಸೇವೆಯನ್ನೇ ಮುಂದುವರಿಸಬೇಕು ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಸಂಘಟನಾ ಕಾರ್ಯದರ್ಶಿ ನಾಗರಾಜು ಒತ್ತಾಯಿಸಿದರು.
ಕಾಲೇಜು ಶಿಕ್ಷಣ ಇಲಾಖೆಯ ಅತಿಥಿ ಉಪನ್ಯಾಸಕರ ಸೇವಾ ಅವಧಿಯು ಈಗಾಗಲೇ 10 ತಿಂಗಳು ಮುಗಿದಿದೆ. ಈ ಕಾರಣಕ್ಕಾಗಿಯೇ ಹೊಸ ಆಯ್ಕೆ ಪ್ರಕ್ರಿಯೆಗೆ ಮುಂದಾಗಿರುವುದಾಗಿ ಕಾರಣ ನೀಡಿ ಅನುಮೋದನೆ ಪಡೆಯಲಾಗಿದೆ. ಆದರೆ, ವಾಸ್ತವವಾಗಿ ಇಲಾಖೆ ಪ್ರಸಕ್ತ ಶೈಕ್ಷಣಿಕ ಅವಧಿಯ ಮಧ್ಯಭಾಗದಲ್ಲಿ ಈ ಆದೇಶ ಹೊರಡಿಸಿದೆ. ಇದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.
ಪ್ರಸ್ತುತ ನಾವು ಮಾಸಿಕ ಸರಾಸರಿ 60 ಗಂಟೆ ಬೋಧನಾ ಕಾರ್ಯದಲ್ಲಿ ತೊಡಗಿದ್ದೇವೆ. ಬೋಧನಾ ಅವಧಿ ಆಧರಿಸಿ ವೇತನ ಪಾವತಿಸಲಾಗುತ್ತಿದೆ. ಆದರೀಗ, ಶೈಕ್ಷಣಿಕ ಅವಧಿಯ ಮಧ್ಯಭಾಗದಲ್ಲಿ ಕೌನ್ಸೆಲಿಂಗ್ ಮೂಲಕ ಹೊಸ ನೇಮಕಾತಿ ಮಾಡಲಾಗುತ್ತಿದೆ. ಹಾಗಿದ್ದರೆ ಈಗ ಕೆಲಸ ಮಾಡುತ್ತಿರುವವರು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದರು.
ಅತಿಥಿ ಉಪನ್ಯಾಸಕರ ಸೇವೆಯನ್ನು ಅಗತ್ಯವಿದ್ದಾಗ ಬಳಸಿಕೊಂಡು ಈಗ ಕೈಬಿಡಲು ಹೊರಟಿರುವುದು ಎಷ್ಟು ಸರಿ? ಡಬಲ್ ಡಿಗ್ರಿ ಮಾಡಿರುವ ಅತಿಥಿ ಉಪನ್ಯಾಸಕರನ್ನು ಸರ್ಕಾರ ಕೂಲಿ ಕೆಲಸಗಾರರಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಿದೆ. ಕಳೆದ ವರ್ಷ 4500 ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ತೆಗೆಯಲಾಗಿದೆ. ಈ ವರ್ಷವೂ ಸುಮಾರು 4,500 ಜನರನ್ನು ತೆಗೆಯಲು ಆಲೋಚಿಸಿದ್ದು, ಇದು ಸರಿಯಲ್ಲ. ಸರ್ಕಾರ ಮಾತೃಹೃದಯವನ್ನು ತೋರಬೇಕಿದೆ ಎಂದರು.
ಸರ್ಕಾರದ ಈ ಕ್ರಮ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೂ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಸರ್ಕಾರ ತನ್ನ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಎದುರು ಧರಣಿ ನಡೆಸಬೇಕಾಗುತ್ತದೆ. ಉನ್ನತ ಶಿಕ್ಷಣ ಸಚಿವರಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಿತಿಯ ಪದಾಧಿಕಾರಿಗಳಾದ ಪ್ರೊ.ವೀರಪ್ಪ, ಪ್ರೊ.ನಂಜುಂಡ, ರಮ್ಯಾ, ಅಶ್ವಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net