

ಮಂಡ್ಯ: ಜೀವನ ಭದ್ರತೆಗೆ ಒತ್ತಾಯಿಸಿ ರಾಜ್ಯ ಅತಿಥಿ ಉಪನ್ಯಾಸಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ತರಗತ ಬಹಿಷ್ಕರಿಸಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಉಪನ್ಯಾಸರು, ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ಸಾಗಿ ಡಿಸಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.
ಹಲವು ವರ್ಷದಿಂದ ನಮ್ಮ ಹೋರಾಟ ನಡೆಯುತ್ತಿದೆ. ಆದರೆ ಯಾವುದೇ ಸರ್ಕಾರ ಬಂದರೂ ಪರಿಹಾರ ಸಿಕ್ಕಿಲ್ಲ. ವಿಪಕ್ಷದಲ್ಲಿದ್ದಾಗ ಭರವಸೆ ನೀಡಿರುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ಬಳಿಕ ನಿರ್ಲಕ್ಷೃ ವಹಿಸುತ್ತಿವೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಕೂಡ ನಮಗೆ ಸೌಲಭ್ಯ ನೀಡುವುದಾಗಿ ತಿಳಿಸಿತ್ತು. ಆದರೆ ಈಗ ಗಮನವನ್ನೇ ಹರಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 467 ಸೇರಿದಂತೆ ರಾಜ್ಯದಲ್ಲಿ 11 ಸಾವಿರ ಅತಿಥಿ ಉಪನ್ಯಾಸಕರು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಕಡಿಮೆ ವೇತನ ಪಡೆದು ಯಾವುದೇ ಸೌಲಭ್ಯವಿಲ್ಲದೆ ದುಡಿಯುತ್ತಿದ್ದೇವೆ. ನಮ್ಮ ಬಗ್ಗೆ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದ ಗಮನಸೆಳೆಯಲು ಹೋರಾಟ ಅನಿವಾರ್ಯ. ಆದ್ದರಿಂದ ಮೆರವಣಿಗೆ ನಡೆಸಿ ಡಿಸಿ ಕಚೇರಿಗೆ ಮನವಿ ಸಲ್ಲಿಸಲಾಗುವುದು. ರಾಜ್ಯ ಸರ್ಕಾರ ಈಗಲಾದರೂ ಬೇಡಿಕೆಗೆ ಸ್ಪಂದಿಸುವ ಮೂಲಕ ಸೇವೆ ಖಾಯಂಗೊಳಿಸುವುದರ ಜತೆಗೆ ಇತರೆ ಸೌಲಭ್ಯ ಒದಗಿಸಿಕೊಡಬೇಕು. ಡಿ.4ರಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಬದುಕಿನ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಪರಮೇಶ್, ಗೌರವಾಧ್ಯಕ್ಷ ಜಿ.ಎ.ರಮೇಶ್, ಡಾ.ಎಂ.ಎಸ್.ಚೆಲುವರಾಜು, ಎಸ್. ಮಂಜು, ಡಾ.ಗಣೇಶ್, ಬಿ.ಆರ್.ಕುಮಾರ್, ಎಸ್.ಆರ್.ರಮ್ಯಾ ಇತರರಿದ್ದರು.