

ಮಂಡ್ಯ: ಅತ್ಯಂತ ತುರ್ತಾಗಿ ಕನ್ನಡವನ್ನು ಡಿಜಿಟಲ್ ಕ್ಷೇತ್ರಕ್ಕೆ ಕೊಂಡೊಯ್ಯಬೇಕಿದೆ. ಹೆಚ್ಚೆಚ್ಚು ಬಳಕೆಗೆ ಒಳಗಾಗುವ ವಿಷಯಗಳು ಡಿಜಿಟಲ್ ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ವೀಕ್ಷಣೆಗೆ ದೊರೆಯುತ್ತವೆ ಎಂದು ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಸಲಹೆ ನೀಡಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ವಾರದ ಅತಿಥಿ ಸಂವಾದದಲ್ಲಿ ಮಾತನಾಡಿದ ಅವರು, ಕನ್ನಡ ಹೆಚ್ಚು ಬಳಕೆಗೆ ಒಳಗಾದಲ್ಲಿ ಅದರಲ್ಲಿ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ. ಅಂತೆಯೇ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸುವ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುವಂತೆ ಸಲಹೆ ನೀಡಲಾಗುವುದು. ಇನ್ನು ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೊಳಿಸಲು ಪರಿಷತ್‌ನ ಅಧ್ಯಕ್ಷರು ಮತ್ತೆ ಮತ್ತೇ ಆ ವಿಷಯದ ಬಗ್ಗೆ ಮಾತನಾಡಬೇಕು. ಮಾತ್ರವಲ್ಲದೆ ಸರ್ಕಾರದ ಮೇಲೆ ಒತ್ತಡ ಹೇರುವಂತಹ ಕೆಲಸ ಮಾಡಬೇಕು ಎಂದರು.
ಸಮ್ಮೇಳನವಾಗಿ ಉಳಿಯುವುದಿಲ್ಲ: ಯಾರಿಗೆ ಬೇಕಾದರೂ ಸಮ್ಮೇಳನಾಧ್ಯಕ್ಷ ಸ್ಥಾನ ಸಿಗುವಂತಾದರೆ ಯಾರಿಗೂ ಬೇಡ ಎನ್ನುವಂತಾಗುತ್ತದೆ. ಹೀಗಾದರೆ ಸಾಹಿತಿ ಸಮ್ಮೇಳನಾಧ್ಯಕ್ಷರೇ ಆಗಲು ಅವಕಾಶ ಸಿಗುವುದಿಲ್ಲ. ಸಮ್ಮೇಳನವು ಸಾಹಿತ್ಯ ಸಮ್ಮೇಳನವಾಗಿ ಉಳಿಯುವುದಲ್ಲ. ಸಮ್ಮೇಳನಾಧ್ಯಕ್ಷರ ಪದವಿ ಸಾಹಿತ್ಯೇತರರಿಗೆ ನೀಡಬೇಕಾಗಿ ಬಂದಲ್ಲಿ ಮೊದಲು ರಾಜಕೀಯದ ಎಲ್ಲ ಪಕ್ಷದವರಿಗೂ ನೀಡಬೇಕಾಗುತ್ತದೆ. ತದನಂತರ ಉದ್ಯಮಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗದವರೂ ಕೇಳಲಾರಂಭಿಸುತ್ತಾರೆ ಎಂದು ಎಚ್ಚರಿಸಿದರು.
ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಸಾಹಿತ್ಯೇತರರ ಪರಿಗಣನೆಯ ವಿವಾದವನ್ನು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಆರಂಭ ಮಾಡಿದರು. ಆದರೆ ನಂತರ ಅವರು ನನ್ನಿಂದಲ್ಲ, ಈ ರೀತಿಯ ವಾದವಿದೆ ಎನ್ನುತ್ತಾರೆ. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯೇತರರು ಇರಬೇಕು. ಆದರೆ ದೊಡ್ಡ ಪರಂಪರೆಯುಳ್ಳ ಸಾಹಿತ್ಯ ಸಮ್ಮೇಳನವು ಸಾಹಿತಿಗಳದ್ದು ಎಂಬುದನ್ನು ಅರಿಯಬೇಕು. ಪರಿಷತ್ ಅಧ್ಯಕ್ಷರು ಸಾಹಿತ್ಯೇತರರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಸಂಬಂಧ ಆಡಿದ ಮಾತುಗಳು ಅರಿವಿಲ್ಲದೇ ಹೀಗೂ ಆಗಬಹುದೇ, ಚರ್ಚೆಗೆ ಅವಕಾಶ ನೀಡುವ ದೃಷ್ಟಿಯಿಂದ ಹೇಳಿದ್ದರೆ ಕ್ಷಮ್ಯವಿದೆ. ಆದರೆ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷ ಸ್ಥಾನದಿಂದ ತಪ್ಪಿಸಬೇಕೆಂದು ಬೇಕಂತಲೇ ಮಾತನಾಡಿದ್ದರೆ ಅದು ತಪ್ಪು ಎಂದರು.
ಸಾಹಿತ್ಯ ಎಂಬುದು ಸಮಾಜವನ್ನು ಒಳಗೊಳ್ಳಬೇಕು. ಸಮಾಜದ ಎಲ್ಲರೂ ಸಾಹಿತ್ಯದ ಭಾಗ ಎಂಬುದು ಪ್ರಾರಂಭವಾಗಿದೆ. ಸಾಹಿತ್ಯದ ಉದ್ದೇಶ, ಪ್ರಯೋಜನ ಏನು ಎನ್ನುವ ವಾದ ಆರಂಭದ ಕಾಲದಿಂದಲೂ ಇದೆ. ಸಾಹಿತ್ಯ ತಿಳಿಯುವುದು, ಓದುವಿಕೆಯಿಂದ ಪುಣ್ಯ ಸಿಗುತ್ತದೆ, ಸಂತೋಷ ಸಿಗುತ್ತದೆ ಎಂಬ ಹೇಳಿಕೆ ಇತ್ತು. ಆದರಿಂದು ಸಾಹಿತಿಗಳಲ್ಲಿ ಪ್ರತಿಕ್ರಿಯಿಸುವ ನಿಲುವುಗಳನ್ನು ನಿಭಾಯಿಸುವ ತಾಕತ್ತು ಇಲ್ಲವಾಗಿದೆ. ಕುವೆಂಪು ಹಾಗೂ ಕಾರಂತರಂತೆ ಅಧಿಕಾರ ಸ್ಥಾನಗಳನ್ನು ತೋಳಂತರದ ದೂರದಲ್ಲಿಡಬೇಕು. ಇದಕ್ಕೆ ಬದಲಾಗಿ ಅಧಿಕಾರ, ಸ್ಥಾನಗಳನ್ನು ಹತ್ತಿರ ಇಟ್ಟುಕೊಳ್ಳಲು ಸಾಹಿತಿಗಳು ಮುಂದಾದಾಗಿನಿಂದ ಎಲ್ಲವೂ ರಾಜಿಯಾದವು. ಸಾಹಿತಿಗಳು ಅಧಿಕಾರ ಸ್ಥಾನಗಳನ್ನು ತೋಳಂತರದಲ್ಲಿ ಇರಿಸಿಕೊಳ್ಳದಿದ್ದರೆ, ನಿಭಾಯಿಸಲು ಸಾಧ್ಯವಾಗುವುದಿಲ್ಲ. ಇಡೀ ಸಾಹಿತ್ಯ ಜಗತ್ತು ಎಡ, ಬಲ ಭಾಗಗಳಾಗಿ ಒಡೆದಿವೆ. ಆದರೆ ಸಾಹಿತ್ಯದಲ್ಲಿ ಎಡ, ಬಲ ಇರುವುದಿಲ್ಲ ಅಜೆಂಡಾಗಳಿರುತ್ತವೆ. ಬದಲಾಗಿ ಅಜೆಂಡಾಗಳಲ್ಲಿ ಸತ್ಯವಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತಿಗಳು ಒಬ್ಬರಿನ್ನೊಬ್ಬರ ಮುಖ ನೋಡದಷ್ಟು ವಿರಸ ಮಾಡಿಕೊಂಡಿದ್ದು, ಸಾಮಾನ್ಯರ ಜಗಳದಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಸಾಹಿತ್ಯ ಎನ್ನುವುದು ಪ್ರತ್ಯೇಕ ಪಕ್ಷಗಳನ್ನು ಸೃಷ್ಠಿಸಿಕೊಂಡ ಸಾಹಿತಿಗಳಿಗೇ ಪ್ರಬುದ್ಧತೆಯ ಪಾಠ ಮಾಡಬೇಕಿದೆ. ಸಾಹಿತಿಗಳು ಕೆಟ್ಟಿರಬಹುದು. ಆದರೆ ಸಾಹಿತ್ಯಕ್ಕೆ ತನ್ನದೇ ಆದ ಘನತೆಯಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಕ್ಷಗಳನ್ನು ಮೀರಿ ನಿಲ್ಲಬೇಕಾಗುತ್ತದೆ ಎಂದು ಸಲಹೆ ನೀಡಿದ ಅವರು, ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಇತರೇ ಕ್ಷೇತ್ರದವರನ್ನು ಒಳಗೊಂಡಂತೆ ಕಾರ್ಯಕ್ರಮ ಮಾಡಬಹುದು. ಆದರೆ ಸಾಹಿತ್ಯದ ಚರ್ಚೆ ನಡೆಯುವ ವೇಳೆ ಇತರೇ ಕ್ಷೇತ್ರಗಳನ್ನು ಸಾಹಿತ್ಯದ ನೆಲೆಯಲ್ಲಿ ಚರ್ಚೆ ಮಾಡಬೇಕಾಗುತ್ತದೆ ಎಂದರು.
ಹಂಪಾ ನಾಗರಾಜಯ್ಯ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಉದ್ಘಾಟಿಸಬೇಕು ಎಂದು ನಿರ್ಣಯವಾಯಿತು. ಇದಾದ ನಂತರ ಮುಖ್ಯಮಂತ್ರಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವಂತಹ ಸಂಸ್ಕೃತಿಯಾಯಿತು. ಅದೇ ರೀತಿ ಜಿಲ್ಲಾ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಬೇಕೆಂದು ಅಲಿಖಿತ ಕಾನೂನಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಕಾನೂನಿನ ಪ್ರಕಾರ ಸ್ವಾಯತ್ತ ಪರಿಷತ್ ಆಗಿದೆ. ಆದರೆ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರದ ಅನುದಾನ ಪಡೆಯುವುದರಿಂದ, ಅದಕ್ಕಾಗಿ ಅಧಿಕಾರಸ್ತರ ಕಡೆಗೆ ಸಾಹಿತ್ಯ ಪರಿಷತ್‌ನ ಆಡಳಿತ ಮಂಡಳಿ ಮುಖ ಮಾಡಿರುವುದರಿಂದ ವಾಸ್ತವವಾಗಿ ಸ್ವಾಯತ್ತವಾಗಿ ಉಳಿದುಕೊಂಡಿಲ್ಲ ಎಂದು ವಿವರಿಸಿದರು.
ಸಂವಾದದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ್, ಮಾಜಿ ಜಿಲ್ಲಾಧ್ಯಕ್ಷ ಕೆ.ಸಿ.ಮಂಜುನಾಥ ಇದ್ದರು.