

ಕುಶಾಲನಗರ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿಗೆ ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಸೋಮವಾರಪೇಟೆಯ ಗುತ್ತಿಗೆದಾರ ಸಂಪತ್‌ನನ್ನು ಕುಶಾಲನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲು ೧.೪೫ ಗಂಟೆ ಹೊತ್ತಿಗೆ ಆಗಮಿಸಿದ್ದ ಸಂದರ್ಭ ಕುಶಾಲನಗರ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಬಂಧಿಸಿದ್ದಾರೆ. ಅದಕ್ಕೂ ಮುನ್ನ ಈತ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ. ಸಂಪತ್ ನ್ಯಾಯಾಲಯ ಸಮೀಪದಲ್ಲಿ ಹೇಳಿಕೆ ನೀಡುವ ವಿಚಾರವನ್ನು ಪತ್ರಕರ್ತರಿಗೆ ಬಿಜೆಪಿ ಮುಖಂಡರು ಮಾಹಿತಿ ನೀಡಿದ್ದರು.
ಆ.೧೮ ರಂದು ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆಯುತ್ತಿದ್ದಂತೆ ಸ್ಥಳದಲ್ಲಿಯೇ ಇದ್ದ ಕುಶಾಲನಗರ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ವಶಕ್ಕೆ ತೆಗೆದುಕೊಂಡಿದ್ದರು. ಸಬ್‌ಇನ್ಸ್‌ಪೆಕ್ಟರ್ ಸಂಪತ್ ಕಾಲರ್ ಪಟ್ಟಿ ಹಿಡಿದುಕೊಂಡಿರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ.೧೮ ರಂದು ತಮ್ಮ ವಶದಲ್ಲಿದ್ದ ಸಂಪತ್‌ನನ್ನು ಪೊಲೀಸರು ಬಿಟ್ಟು ಕಳುಹಿಸಿರುವುದು ಚರ್ಚೆಗೆ ಗ್ರಾಸ ವಾಗಿದೆ.
ಮಾಜಿ ಸಚಿವ ಬಿ.ಎ. ಜೀವಿಜಯ ಬೆಂಬಲಿಗ
ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದಿರುವ ಆರೋಪಿ ಸಂಪತ್ ನಾನು ಮಾಜಿ ಸಚಿವ ಬಿ.ಎ. ಜೀವಿಜಯ ಬೆಂಬಲಿಗ ಎಂದು ಶನಿವಾರ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾನೆ.
ನಾನು ಮೂಲತಃ ಜೆಡಿಎಸ್ ಪಕ್ಷದವನಾಗಿದ್ದು, ಜೆಡಿಎಸ್‌ಗೆ ಕೆಲಸ ಮಾಡುತ್ತಿದ್ದೆ. ಜೀವಿಜಯ ಜೆಡಿಎಸ್ ತೊರೆದು ಕಾಂಗ್ರೆಸ್ ಬಂದ ಮೇಲೆ ನಾನು ಕಾಂಗ್ರೆಸ್ಸಿಗೆ ಬಂದಿದ್ದೇನೆ. ಬಿಜೆಪಿಗೆ ಸೇರಿಲ್ಲ ಎಂದು ಹೇಳಿಕೊಂಡಿದ್ದಾನೆ. ನಾನು ಮೊದಲು ಹಿಂದು. ಅಲ್ಲಿಂದ ಜೆಡಿಎಸ್, ಕಾಂಗ್ರೆಸ್. ಹಿಂದು ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಶಾಸಕರೊಂದಿಗೆ ಫೋಟೋ ತೆಗೆಸಿಕೊಂಡಿರುವುದಾಗಿ ಹೇಳಿದ್ದಾರೆ.
ಕೊಡಗಿನವರು ಧನದ ಮಾಂಸ ತಿನ್ನುತ್ತಾರೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ನನಗೆ ಬೇಸರ ಇತ್ತು. ಆ ಕಾರಣಕ್ಕಾಗಿ ಸಿದ್ದರಾಮಯ್ಯ ಹೋಗುತ್ತಿದ್ದ ಕಾರಿಗೆ ಮೊಟ್ಟೆ ಎಸೆದಿದ್ದೇನೆ. ಟಿಪ್ಪು ಜಯಂತಿ ಆಚರಣೆ ಮಾಡಿದ್ದು, ಟಿಪ್ಪು ಪರ ಹೇಳಿಕೆ ನೀಡಿರುವುದು ನನಗೆ ಕೋಪ ತರಿಸಿತ್ತು. ಕುಶಾಲನಗರಕ್ಕೆ ಕೆಲಸಕ್ಕೆಂದು ಬಂದಿದ್ದು, ಊಟ ಮಾಡಲು ಗುಡ್ಡೆಹೊಸೂರಿಗೆ ಹೋಗಿದ್ದೆ ಎಂದಿದ್ದಾರೆ.
ಶಾಸಕರ ಆಪ್ತ
ಸಂಪತ್ ತಂದೆ ಸಂಪತ್ ಮೂರ್ತಿ ೨೦೧೨ ರಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯರಾಗಿದ್ದರು. ಸೋಮವಾರಪೇಟೆ ಪಟ್ಟಣದ ಲೋಡರ್ಸ್ ಕಾಲನಿ ನಿವಾಸಿಯಾಗಿದ್ದು, ಜೆಡಿಎಸ್‌ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ. ೨೦೧೮ ರಲ್ಲಿ ನಡೆದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಜೆಡಿಎಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಂಪತ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ. ತಾವು ಕೇಳಿದ್ದ ವಾರ್ಡ್‌ನಲ್ಲಿ ಕಾಂಗ್ರೆಸ್ಸಿನ ಕೆ.ಎ. ಆದಂಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಸಂಪತ್ ಅಸಮಾಧಾನಗೊಂಡಿದ್ದ. ೨೦೧೯ ರಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಸೋಮವಾರಪೇಟೆ ಭಾಗದಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ.
ಹಿಂದು ಪರ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ. ಇದರೊಂದಿಗೆ ಹೆಚ್ಚಿನ ಸಮಯ ಶಾಸಕರ ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ. ಆ.೧೮ ರಂದು ಮತ್ತಿಬ್ಬರು ಗುತ್ತಿಗೆದಾರರೊಂದಿಗೆ ಗುಡ್ಡೆಹೊಸೂರಿಗೆ ತೆರಳಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮಡಿಕೇರಿ ಶಾಸಕರೊಂದಿಗೆ ಕೇಸರಿ ಶಾಲು ಧರಿಸಿದ್ದ ಸಂಪತ್ ಫೋಟೋ ವೈರಲ್ ಆಗಿದೆ. ಶಾಸಕರ ಆಪ್ತ ಎಂದು ಕಾಂಗ್ರೆಸ್ಸಿಗರು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿಯ ಬಿಟ್ಟಿದ್ದಾರೆ.
ಕೊಡಗಿನ ಗಡಿ ಭಾಗ ತಿತಿಮತಿಯಲ್ಲಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದರ ಮೂಲಕ ಪ್ರತಿಭಟನೆಯ ಕಿಚ್ಚುಹಚ್ಚಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಅವರೊಂದಿಗೆ ಮೊಟ್ಟೆ ಎಸೆತ ಆರೋಪಿ ಸಂಪತ್ ಇರುವ ಫೋಟೋ ವೈರಲ್ ಆಗಿದೆ.
ಕಾಂಗ್ರೆಸ್ ವೇಷ
ಮೊಟ್ಟೆ ಎಸೆತದ ಆರೋಪಿ ಸಂಪತ್ ಕಾಂಗ್ರೆಸ್ ಶಾಲು ಹಾಕಿ, ಕ್ಯಾಪ್ ಧರಿಸಿ, ಧ್ವಜ ಹಿಡಿದಿರುವ ಫೋಟೋ ಸಹ ವೈರಲ್ ಆಗಿದೆ. ಈತ ಕಾಂಗ್ರೆಸ್ಸಿಗ ಎಂದು ವಾದಿಸಲು ಬಿಜೆಪಿ ಮುಖಂಡರು- ಕಾರ್ಯಕರ್ತರು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿ ದ್ದಾರೆ.