ತಮಿಳುನಾಡು ಜನಪ್ರತಿನಿಧಿಗಳು ಗುಡ್ಡೆಹೊಸೂರು ಪಂಚಾಯಿತಿಗೆ ಭೇಟಿ

guddehosur
Published on

ಮಡಿಕೇರಿ:

ತಮಿಳುನಾಡಿನ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ಮೂವತ್ತು ಸದಸ್ಯರ ತಂಡ ಮಂಗಳವಾರ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿತು. ಕರ್ನಾಟಕದಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ, ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯವೈಖರಿ ಯೋಜನೆ ಮತ್ತು ಮೇಲ್ವಿಚಾರಣೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಮತ್ತು ಯೋಚನೆಗಳ ಅನುಷ್ಠಾನ, ವಿನೂತನ ಚಟುವಟಿಕೆಗಳು ಮತ್ತಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಸೂಕ್ತವಾದವುಗಳನ್ನು ಅನುಕರಣೆ ಮಾಡುವ ಉದ್ದೇಶದಿಂದ ಈ ಭೇಟಿ ನಿಗದಿಯಾಗಿತ್ತು.

ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ತಂಡದ ಸದಸ್ಯರು ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯೊAದಿಗೆ ಸಂವಾದ ನಡೆಸಿ ರಾಜ್ಯದ ಗ್ರಾಮ ಪಂಚಾಯಿತಿಗಳ ಕಾರ್ಯ ವಿಧಾನ ವಿಶೇಷವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ವಿನೂತನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಗ್ರಾಮ ಪಂಚಾಯಿತಿಯ ಸ್ವಚ್ಛ ಸಂಕೀರ್ಣ ಘಟಕ, ಕುಡಿಯುವ ನೀರಿನ ಫಿಲ್ಟರ್, ಶಾಲಾ ಉದ್ಯಾನವನಗಳು, ಡಿಜಿಟಲ್ ಗ್ರಂಥಾಲಯ ಮತ್ತಿತರ ಕಡೆಗಳಿಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭ ಸಂಜೀವಿನಿ ಒಕ್ಕೂಟದ ವತಿಯಿಂದ ತಯಾರಿಸಲಾದ ಉತ್ಪನ್ನಗಳ ಪ್ರದರ್ಶನ

ಹಮ್ಮಿಕೊಳ್ಳಲಾಗಿತ್ತು.

ಕುಶಾಲನಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ. ಆರ್. ಸುಮೇಶ್ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡ ವಿನೂತನ ಕಾರ್ಯಕ್ರಮಗಳನ್ನು ಪರಿಚಯಿಸಿದರು. ಗ್ರಾಮ ಪಂಚಾಯಿತಿ ಅಧಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್ ಕುಮಾರ್, ಆಡಳಿತ ಮಂಡಳಿಯ ಸದಸ್ಯರು ಈ ಸಂದರ್ಭ ಇದ್ದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಬೋಧಕರಾದ ಟಿ.ಎಂ. ಅಬೂಬಕರ್ ಮತ್ತು ಶಶಿಕುಮಾರ್ ಅಧ್ಯಯನ ತಂಡದ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net