

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ(ಗ್ರಾ): ತಾಲೂಕಿನ ಹಳೇಬಂಕಾಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಬಾಡ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಗುಡ್ಡದಚನ್ನಾಪುರ ಹಿರಿಯ ಪ್ರಾಥಮಿಕ ಶಾಲೆ ಸಮಗ್ರ ವೀರಾಗ್ರಣಿಯಾಗಿ ಹೊರಹೊಮ್ಮಿದೆ.
ಮಂಗಳವಾರ ಮತ್ತು ಬುಧವಾರ ಎರಡು ದಿನ ನಡೆದ ಕ್ರೀಡಾಕೂಟದಲ್ಲಿ 7 ಹಿರಿಯ ಪ್ರಾಥಮಿಕ ಶಾಲೆಗಳು ಪಾಲ್ಗೊಂಡಿದ್ದವು.
ಗುಡ್ಡದಚನ್ನಾಪುರ ಶಾಲೆ ವಿದ್ಯಾರ್ಥಿಗಳು ವಾಲಿಬಾಲ್, ಥ್ರೋಬಾಲ್, ರೀಲೆ ಸ್ಪರ್ಧೆಯ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು.
ಆತಿಥ್ಯ ವಹಿಸಿದ್ದ ಹಳೆಬಂಕಾಪುರ ಶಾಲೆ ಗುಂಪು ಆಟಗಳಾದ ಕಬಡ್ಡಿ ಮತ್ತು ಖೋ ಖೋ ಸ್ಪರ್ಧೆಯ ಪುರುಷ ಮತ್ತು ಮಹಿಳಾ ವಿಭಾಗಗಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು.
ಬಾಡ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಪ್ರತಿಭಾ ತೊಂಡೂರ ಉದ್ದ ಜಿಗಿತ, 100ಮೀ.ಓಟ, 400ಮೀ.ಓಟ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಕ್ರೀಡಾಕೂಟದ ವಯಕ್ತಿಕ ವಿರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ.
ಚಾಲನೆ: ಮಂಗಳವಾರ ಅರಂಭಗೊಂಡ ಕ್ರೀಡಾಕೂಟಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ ಬೈಲವಾಳ ಮತ್ತು ಎಸ್ಡಿಎಂಸಿ ಅಧ್ಯಕ್ಷ ಸುಭಾಸ ಮುರಾರಿ ಚಾಲನೆ ನೀಡಿದರು.
ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಹೇಮಪ್ಪ ರೆಡ್ಡಿ, ತಾಲೂಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಫ್.ಸಿ.ಕಾಡಪ್ಪಗೌಡ್ರ, ಮಹಾಂತೇಶ ಬಾವಿಕಟ್ಟಿ, ಗ್ರಾಪಂ ಸದಸ್ಯರಾದ ಸುರೇಶ ಮುರಾರಿ, ರತ್ನವ್ವ ತಳವಾರ, ನಿರ್ಮಲಾ ಈಳಿಗೇರ, ಮುಖ್ಯೋಪಾಧ್ಯಾಯ ಎಚ್.ಡಿ.ಆಶಾದಿ, ಗಣೇಶ ಮಾಳಮ್ಮನವರ, ಎಸ್.ಎ.ಸವಣೂರ, ಎಮ್ಸಿ.ಸಿದ್ದನಗೌಡ್ರ, ನಂದಾ ಸುಂಕದ ದೈಹಿಕ ಶಿಕ್ಷಕರಾದ ಬಿ.ಎಸ್.ಡಾಣಗಲ್, ನವೀನ ಸುಂಕದ, ಈರಣ್ಣ ಬಂಗಿ, ಎಮ್ಎಸ್.ಕಿತ್ತೂರ, ಎಮ್ಎಮ್ಸನ್ನುಖಾನ ಮತ್ತಿತರರು ಉಪಸ್ಥಿತರಿದ್ದರು.