

ಬಾದಾಮಿ: ಸರ್ಕಾರ ಪ್ರತಿ ವರ್ಷ ವೃತ್ತಿ ರಂಗಭೂಮಿ ಕಲಾವಿದರಿಗೆ ನೀಡುತ್ತಿರುವ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆ ಕ್ಷೇತ್ರಕ್ಕೆ ಸೇರಿದ ಕಲಾವಿದರನ್ನೇ ಆಯ್ಕೆ ಮಾಡಬೇಕು ಎಂದು ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎಲ್.ಬಿ. ಶೇಖ್ ಆಗ್ರಹಿಸಿದರು.
1996ರಲ್ಲಿ ವೃತ್ತಿ ರಂಗಭೂಮಿ ಕಲಾವಿದರಿಗಾಗಿ ಗುಬ್ಬಿ ವೀರಣ್ಣ ಪ್ರಶಸ್ತಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರಿಗಾಗಿ ಬಿ.ವಿ. ಕಾರಂತ ಪ್ರಶಸ್ತಿ ನೀಡಲು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದ್ದರು. ಆದರೆ, ಹಿಂದಿನ ಬಿಜೆಪಿ ಸರ್ಕಾರ ವಿವಿಧ ಪ್ರಶಸ್ತಿಗಳ ಆಯ್ಕೆಗೆ ಒಂದೇ ಸಮಿತಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2024ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಸಾಹಿತಿ ಕುಂ ವೀರಭದ್ರಪ್ಪ ಅವರನ್ನು ನೇಮಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಹವ್ಯಾಸಿ ರಂಗಭೂಮಿ ಕಲಾವಿದೆ ಮರಿಯಮ್ಮನಹಳ್ಳಿ ನಾಗರತ್ನಮ್ಮ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಾಟ್ಸ್ ಆ್ಯಪ್ ಸಂದೇಶ ಹರಿದಾಡುತ್ತಿದೆ. ವೃತ್ತಿ ರಂಗಭೂಮಿ ಕಲಾವಿದರ ಬದಲಾಗಿ ಹವ್ಯಾಸಿ ರಂಗಭೂಮಿ ಕಲಾವಿದರಿಗೆ ಪ್ರಶಸ್ತಿ ನೀಡುತ್ತಿರುವುದು ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ ಎಂದರು.
ಗುಬ್ಬಿ ವೀರಣ್ಣ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ರಂಗಭೂಮಿ ಕಲಾವಿದರಿರಬೇಕು ಮತ್ತು ವೃತ್ತ್ತಿರಂಗಭೂಮಿ ಕಲಾವಿದರಿಗೆ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿ ಈಗಾಗಲೇ ನಾಟಕ ಅಕಾಡೆಮಿ ಹಾಗೂ ಇಲಾಖೆ ನಿರ್ದೇಶಕರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ ಎಂದರು.
ನಾಟಕ ಕಂಪನಿ ಮಾಲೀಕರಾದ ಬಂಗಾರೇಶ, ರಾಜಣ್ಣ ಜೀವರಗಿ, ಪ್ರೇಮಾ ಗುಳೇದಗುಡ್ಡ, ಮಂಜು ಜಾಲಿಹಾಳ, ಕಲ್ಲೂರ ವೆಂಕಟೇಶ ದಂಡಿನ, ಪಾಪು ಕಲ್ಲೂರ, ಕುಮಾರ ಅರಳಿಹಳ್ಳಿ, ಜ್ಯೋತಿ ಗುಳೇದಗುಡ್ಡ, ಬಸೀರ್ ತಾಳಿಕೋಟಿ, ಆನಂದ ಬೆಂಗಳೂರು ಮತ್ತಿತರರಿದ್ದರು.