

ಗುಬ್ಬಿ : ಅಮ್ಮನಘಟ್ಟ ಮೀಸಲು ಅರಣ್ಯ ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ತೆಂಗು, ಅಡಕೆ ಮರಗಳನ್ನು ಕಡಿದು ಅನೇಕ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಭಾನುವಾರ ಅರಣ್ಯ ಇಲಾಖೆ ಕೈಯಿಟ್ಟಿದೆ.
ಜಮೀನಿನಲ್ಲಿ ಕೆಲ ರೈತರು ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ. 10 ವರ್ಷಗಳ ಹಿಂದೆಯೇ ಗಡಿ ಗುರುತಿಸಿದ್ದರೂ ಅದನ್ನು ಪರಿಗಣಿಸದೆ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರ ಬೆಂಬಲದೊಂದಿಗೆ ಏಕಾಏಕಿ ಮರಗಳನ್ನು ಕಡಿದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅರಣ್ಯ ಜಮೀನು ಒತ್ತುವರಿಯಾಗಿದ್ದಲ್ಲಿ ರೈತರಿಗೆ ಸೂಚನೆ ನೀಡಿ ತೆರವುಗೊಳಿಸಲು ಅವಕಾಶವಿತ್ತು. ಆದರೆ ಉದ್ದೇಶ ಪೂರ್ವಕವಾಗಿಯೇ ಅಧಿಕಾರಿಗಳು ಭಾನುವಾರದಂದೇ ಕಾರ್ಯಾಚರಣೆ ಮಾಡುತ್ತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಮೀನಿಗೆ ಸಂಬಂಧಪಟ್ಟಂತೆ ಶಾರದಮ್ಮ ಎಂಬುವವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯದ ಆದೇಶ ಪ್ರತಿಯನ್ನು ಸೋಮವಾರ ತಂದುಕೊಡುತ್ತೇವೆ ಎಂದು ಪರಿಪರಿಯಾಗಿ ಕೇಳಿಕೊಂಡರೂ, ಅಧಿಕಾರಿಗಳು ಮರಗಳನ್ನು ಕಡಿಸಿದರು.
ಅರಣ್ಯಇಲಾಖೆ ಜಾಗ ಒತ್ತುವರಿ ಮಾಡಿಕೊಂಡಿಲ್ಲ ಎಂಬುದು ರೈತರ ವಾದವಾಗಿತ್ತು. ಆದರೆ ಇಲಾಖೆ ಬಳಿ ಇರುವ ದಾಖಲೆಗಳಿಗೆ ಅನುಗುಣವಾಗಿ ತೆರವು ಮಾಡುತ್ತಿದ್ದೇವೆ ಎಂಬುದು ಅಧಿಕಾರಿಗಳ ಪ್ರತಿವಾದವಾಗಿತ್ತು.
ಅಧಿಕಾರಿಗಳು ಯಾವ ಕಾರಣಕ್ಕಾಗಿ ಮಾನವೀಯತೆ ಮರೆತು ಕಾರ್ಯಾಚರಣೆ ನಡೆಸಿದರು ಎಂಬುದು ತಿಳಿಯಬೇಕಾಗಿದೆ ಎಂದು ರೈತ ಮಹಿಳೆ ಶಾರದಮ್ಮ ಅಳಲು ತೋಡಿಕೊಂಡರು.
ನ್ಯಾಯಾಲಯದ ಆದೇಶ ಪಾಲಿಸಲು ಸಿದ್ಧರಿದ್ದೇವೆ. ಅರಣ್ಯ ಇಲಾಖೆ ಒತ್ತುವರಿ ಜಮೀನು ತೆರವುಗೊಳಿಸುತ್ತಿದ್ದೇವೆ. ದುಗ್ಗಪ್ಪ, ವಲಯ ಅರಣ್ಯ ಅಧಿಕಾರಿ