

ಗುಬ್ಬಿ : ಕೆರೆಯ ಅಂಗಳದಲ್ಲಿ ಕಾಲೇಜು ಮಾಡಿ ಮಳೆಯ ನೀರಿಗೆ ಅಂಜಿದೊಡೆ ಎಂತಯ್ಯ..! ಎಂಬ ಸ್ಥಿತಿ ಇಲ್ಲಿ ಎದುರಾಗಿದೆ.
ಪಟ್ಟಣದ ಮಾರಣಕಟ್ಟೆ ಅಂಗಳದ ತಗ್ಗು ಪ್ರದೇಶದಲ್ಲಿರುವ ಸರ್ಕಾರಿ ಸ್ವಾಯತ್ತ ಪದವಿ ಕಾಲೇಜು ಆವರಣವು ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡು ತಿಂಗಳಾಗಿದೆ. ಮಳೆನೀರು ನಿಂತು ಕೊಳೆತು ನಾರುವಂತಾಗಿದ್ದು ಸಾಂಕ್ರಾಮಿಕ ರೋಗಗಳ ಉಗಮಸ್ಥಾನವಾಗಿ ಮಾರ್ಪಟ್ಟಿದೆ.
ಮಾರಣಕಟ್ಟೆ ಅಂಗಳದ 10 ಎಕರೆ ಪ್ರದೇಶ ವ್ಯಾಪ್ತಿಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ 1300 ವಿದ್ಯಾರ್ಥಿಗಳು ಓದುತ್ತಿದ್ದಾರೆ. 1983ರಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಆರಂಭವಾದ ಪದವಿ ಕಾಲೇಜು ನಂತರ ಮಾರಣಕಟ್ಟೆ ಅಂಗಳದಲ್ಲಿ ನೀಡಿದ ಸ್ವಂತ ಜಾಗಕ್ಕೆ ಸ್ಥಳಾಂತರಗೊಂಡಿತು. ಅಂದಿನಿಂದ ಇಂದಿನವರೆಗೆ ಮಳೆಗಾಲದಲ್ಲಿ ಅಕ್ಷರಶಃ ಕಾಲೇಜು ಆವರಣ ಕೆರೆಯಾಗುತ್ತಿದೆ. ಇಷ್ಟಾದರೂ ಪಟ್ಟಣ ಪಂಚಾಯಿತಿಯಾಗಲಿ, ಕಾಲೇಜು ಶಿಕ್ಷಣ ಇಲಾಖೆ ಆಗಲಿ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಬಿ.ಎ., ಬಿ.ಎಸ್ಸಿ, ಬಿ.ಕಾಂ., ಬಿಬಿಎಂ., ಅಲ್ಲದೆ, ಸ್ನಾತಕೋತ್ತರ ಕನ್ನಡ, ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ವಾಣಿಜ್ಯ ವಿಭಾಗಗಳ ಕೋರ್ಸ್‌ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಜಿಲ್ಲೆಯಲ್ಲಿಯೇ ಏಕೈಕ ಸರ್ಕಾರಿ ಸ್ವಾಯತ್ತ ಕಾಲೇಜು ಇದಾಗಿದೆ.
ಸೊಳ್ಳೆಗಳ ಉತ್ಪತ್ತಿ ತಾಣ : ನಿಂತ ನೀರು ನಾರುತ್ತಿದ್ದು, ಸೊಳ್ಳೆ, ನೊಣಗಳ ಉತ್ಪತ್ತಿ ತಾಣವಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರೋಗ ಭೀತಿಯಲ್ಲಿ ಕಾಲ ಕಳೆಯುಂತಾಗಿದೆ. ಜನಪ್ರತಿನಿಧಿಗಳು ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವ ಕಡೆ ಗಮನ ಹರಿಸದಿರುವುದು ವಿಷಾದನೀಯ. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಎಸ್.ಆರ್.ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಇತ್ತೀಚಿಗೆ ಕಾಲೇಜಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ. ಆದರೂ, ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಹಿಡಿಯುವ ಪ್ರಯತ್ನವನ್ನು ಪಪಂ ಅಧಿಕಾರಿಗಳು ಮಾಡದೇ ಇರುವುದು ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ಬಿಇಒ ಕಚೇರಿ, ನ್ಯಾಯಾಧೀಶರ ಕ್ವಾರ್ಟರ್ಸ್! : ಮಾರಣಕಟ್ಟೆ ಪ್ರದೇಶದಲ್ಲಿ ಬಿಇಒ ಕಚೇರಿ, ಅರಣ್ಯ ಇಲಾಖೆ, ಹೇಮಾವತಿ ಕಚೇರಿ, ಬಿಸಿಎಂ ಬಾಲಕಿಯರ ಹಾಸ್ಟೆಲ್, ನ್ಯಾಯಾಧೀಶರ ವಸತಿ ಗೃಹಗಳು ಇವೆ. ಮಳೆಗಾಲದಲ್ಲಿ ಈ ಭಾಗವು ಸಂಪೂರ್ಣ ಜಲಾವೃತವಾಗಿ ಎಲ್ಲರೂ ಪಡಿಪಾಟಲು ಪಡುವಂತಾಗಿದೆ. ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟ. ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿಯನ್ನು ಪಪಂ ನಿರ್ಮಿಸಿಲ್ಲ. ಸಮಸ್ಯೆಗಳಿದ್ದರೂ ಸಂಬಂಧಪಟ್ಟವರ‌್ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.
ಬಸ್ ನಿಲ್ದಾಣಕ್ಕೆ ಕಾಲೇಜು ತುಂಬಾ ಹತ್ತಿರದಲ್ಲಿರುವುದರಿಂದ ಗ್ರಾಮೀಣ ಭಾಗಗಳಿಂದ ಬಂದು ಹೋಗಲು ತುಂಬಾ ಅನುಕೂಲವಿದೆ. ಆದರೆ, ಮಳೆ ಬಂದಾಗ ಕೆರೆಯಂತೆ ನೀರು ನಿಲ್ಲುವುದರಿಂದ ರೋಗಗಳು ಹರಡುವ ಭೀತಿ ಇದೆ. ಇನ್ನು ಕ್ರೀಡೆಗಳಿಗೆ ಆಸ್ಪದವೇ ಇಲ್ಲವಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ನಮಗೆ ಅನುಕೂಲ ಮಾಡಿಕೊಡಬೇಕು. ಪ್ರಜ್ವಲ್ ಬಿ.ಎಸ್ಸಿ ವಿದ್ಯಾರ್ಥಿ ಕಾಲೇಜು ಆವರಣದಲ್ಲಿ ನೀರು ನಿಲ್ಲುವ ವಿಷಯವನ್ನು ಶಾಸಕರು ಹಾಗೂ ಪಪಂ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಎನ್‌ಇಪಿ ಅನುಷ್ಠಾನಗೊಂಡಿದ್ದು ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಮಳೆ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಡಾ.ವೆಂಕಟಾಚಲಯ್ಯ, ಕಾಲೇಜು ಪ್ರಾಂಶುಪಾಲ