ಭೀಮಾ ‘ತೀರದ’ ಸಂತ್ರಸ್ತರ ಸಂಕಟ !

VJP_dhulle
Published on
ಪರಶುರಾಮ ಭಾಸಗಿ ವಿಜಯಪುರ

ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ಭೀಮಾತೀರದಲ್ಲಿ ನೆರೆ ನಿಂತರೂ ಸಂತ್ರಸ್ತರ ಸಂಕಷ್ಟ ನಿಲ್ಲದಾಗಿದೆ !

ನೆರೆ ನಿಂತು ತಿಂಗಳಾದರೂ ಪರಿಹಾರಕ್ಕಾಗಿ ಪ್ರವಾಹ ಪೀಡಿತರು ಇನ್ನೂ ಪರಿತಪಿಸುತ್ತಿದ್ದಾರೆ. ಒಂದೆಡೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದರೆ ಇನ್ನೊಂದೆಡೆ ಸ್ಥಳೀಯ ಅಧಿಕಾರಿಗಳ ಲಂಚಬಾಕ ಸಂಸ್ಕೃತಿ ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂಡಿ ತಾಲೂಕಿನ ಗುಬ್ಬೇವಾಡ ಗ್ರಾಮದ ಬಾಧಿತರು ಸ್ಥಳೀಯ ಆಡಳಿತ ವಿರುದ್ಧ ತಾಲೂಕಾಧಿಕಾರಿಗಳಿಗೆ ದೂರು ನೀಡಿದರೂ ಸಿಗದ ಪರಿಹಾರದಿಂದ ಬೇಸತ್ತು ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಏನಿದು ಪ್ರಕರಣ?

ಕಳೆದ ಅಕ್ಟೋಬರ್‌ನಲ್ಲಿ ಭೀಮಾತೀರದ 28 ಗ್ರಾಮಗಳು ಜಲಾವೃತಗೊಂಡಿದ್ದವು. ಸಾವಿರಾರು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಧವಸ-ಧಾನ್ಯಗಳು, ಪಾತ್ರೆ-ಪಗಡೆಗಳು, ಇನ್ನಿತರ ದಿನಬಳಕೆ ಸಾಮಗ್ರಿಗಳು ಪ್ರವಾಹದ ಪಾಲಾಗಿದ್ದವು. ಗ್ರಾಮಗಳನ್ನು ಸ್ಥಳಾಂತರಿಸಿ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿರಲು ಅವಕಾಶ ಕಲ್ಪಿಸಲಾಗಿತ್ತು. ಸದರಿ ಸಂತ್ರಸ್ತರಿಗೆ ಸರ್ಕಾರ ತಾತ್ಕಾಲಿಕ ಪರಿಹಾರವಾಗಿ 10 ಸಾವಿರ ರೂ. ಘೋಷಿಸಿತ್ತು. ತಕ್ಷಣಕ್ಕೆ ನಡೆದ ಸಮೀಕ್ಷೆ ಆಧರಿಸಿ 1225 ಮನೆಗಳ ಪೈಕಿ 525 ಕುಟುಂಬಗಳಿಗೆ ಪರಿಹಾರ ನೀಡಲಾಗಿತ್ತು. ಆ ಬಳಿಕ ಸಮೀಕ್ಷೆ ಮುಂದುವರಿಸಿದಾಗ ಹೆಚ್ಚುವರಿ ಮನೆಗಳು ಸಮೀಕ್ಷೆಗೆ ಸೇರ್ಪಡೆಗೊಂಡವು. ಇನ್ನೂ ಅನೇಕ ಮನೆಗಳು ಸಮೀಕ್ಷೆಯಿಂದ ಹೊರಗುಳಿದಿದ್ದು, ಪರಿಹಾರ ಪಟ್ಟಿಗೆ ಸೇರ್ಪಡೆಗೊಳಿಸಲು ಸ್ಥಳೀಯ ಅಧಿಕಾರಿಗಳು ದಲ್ಲಾಳಿಗಳ ಮೂಲಕ ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ವಿಳಂಬಕ್ಕೆ ಕಾರಣವೇನು?

4041 ಕುಟುಂಬಗಳಿಗೆ 10 ಸಾವಿರದಂತೆ ಈಗಾಗಲೇ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಒಟ್ಟು 3031 ಮನೆಗಳಿಗೆ ಹಾನಿಯಾಗಿದ್ದು, 2837 ಮನೆಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಆ ಪೈಕಿ 2814 ಮನೆಗಳಿಗೆ ಪರಿಹಾರಕ್ಕಾಗಿ ಅನುಮೋದನೆ ನೀಡಲಾಗಿದೆ. ಇನ್ನೂ 174 ನೋಂದಣಿಯಾಗಬೇಕಿವೆ. ಇನ್ನೂ ಅನೇಕ ಫಲಾನುಭವಿಗಳು ಪರಿಹಾರದಿಂದ ವಂಚಿತವಾಗಿದ್ದಾರೆ. ಕಾರಣ ಕೇಳಿದರೆ ಅಸಮರ್ಪಕ ದಾಖಲೆ, ತಪ್ಪಾದ ಬ್ಯಾಂಕ್ ವಿವರದಿಂದ ಪರಿಹಾರ ವಿಳಂಬಗೊಂಡಿದ್ದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸುತ್ತಾರೆ. ವಾಸ್ತವದಲ್ಲಿ ಇದೊಂದು ನೆಪವಾಗಿದ್ದು, ಲಂಚ ನೀಡದ ಕಾರಣ ಪರಿಹಾರ ವಿಳಂಬಗೊಳಿಸುತ್ತಿರುವುದಾಗಿ ಸಂತ್ರಸ್ತರು ಆರೋಪಿಸುತ್ತಿದ್ದಾರೆ.

ನನ್ನ ಮನೆಯಂತೆಯೇ ಇಲ್ಲಿ ಅನೇಕರ ಮನೆಗೆ ನೀರು ನುಗ್ಗಿದರೂ ಪರಿಹಾರ ಸಿಕ್ಕಿಲ್ಲ. ಕಾರಣ ಕೇಳಿದರೆ ನಿಮ್ಮ ಮನೆಗೆ ನೀರು ಹೊಕ್ಕಿಲ್ಲವೆನ್ನುತ್ತಾರೆ. ಸಮೀಕ್ಷೆಗೂ ಬಂದಿಲ್ಲ. ನಾವೇ ಫೋಟೊ ತೋರಿಸಿದರೂ ನಂಬುತ್ತಿಲ್ಲ. ಈ ಬಗ್ಗೆ ತಾಲೂಕು ಅಧಿಕಾರಿಗಳಿಗೆ 30 ಕುಟುಂಬಸ್ಥರು ಮನವಿ ಸಲ್ಲಿಸಿದ್ದೇವೆ. ಈವರೆಗೂ ಪರಿಹಾರ ಸಿಕ್ಕಿಲ್ಲ. ಕೆಲವರು ಹಣ ಕೊಟ್ಟು ಮಾಡಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ. ಸಂಗಪ್ಪ ಮಲ್ಲಪ್ಪ ಧುಳೆ, ಗುಬ್ಬೇವಾಡ ಸಂತ್ರಸ್ತಕೆಲವರ ಬ್ಯಾಂಕ್ ವಿವರ ತಪ್ಪಾಗಿ ನೋಂದಣಿಯಾಗಿದೆ. ಹೀಗಾಗಿ ಪರಿಹಾರ ವಿಳಂಬವಾಗಿದೆ. ಸಂಗಪ್ಪ ಧುಳೆ ನೈಜ ಫಲಾನುಭವಿಯಾಗಿದ್ದಾರೆ. ಶೀಘ್ರದಲ್ಲೇ ಅವರಿಗೆ ಪರಿಹಾರ ನೀಡುತ್ತೇವೆ. ಏಳೆಂಟು ಸಂತ್ರಸ್ತರ ವಿವರ ತಾಲೂಕು ಕಚೇರಿಯಲ್ಲಿ ತಪ್ಪಾಗಿ ನೋಂದಣಿಯಾಗಿದೆ. ಪರಿಶೀಲನೆ ನಡೆಯುತ್ತಿದ್ದು, ಪರಿಹಾರ ನೀಡಲಾಗುವುದು.ವಿರೇಶ ಹಿಟ್ನಳ್ಳಿ, ಪಿಡಿಒ ಗುಬ್ಬೇವಾಡಪರಿಹಾರ ಕಾರ್ಯ ತ್ವರಿತವಾಗಿ ಸಾಗುತ್ತಿದೆ. ಇಂಡಿ ತಾಲೂಕಿನಲ್ಲಿ ನಡೆದ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೊಂದು ವೇಳೆ ಅಧಿಕಾರಿಗಳಿಂದಲೇ ಅಚಾತುರ್ಯವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಪರಿಹಾರದಿಂದ ಯಾರೂ ವಂಚಿತಗೊಳ್ಳದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಿದೆ.ಪಿ.ಸುನೀಲಕುಮಾರ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net