ಬಾಡಿಗೆ ಮನೆಯಲ್ಲಿ ವಾಸಿಸುವ ಚನ್ನಗಿರಿ ಠಾಣೆ ಪೊಲೀಸರು

30 chn
Published on

ಟಿ.ಎನ್. ಜಗದೀಶ್ ಚನ್ನಗಿರಿ

ಸಾರ್ವಜನಿಕರನ್ನು ರಕ್ಷಿಸುವ ಪೊಲೀಸರಿಗೆ ಸರಿಯಾದ ಸೂರು ಇಲ್ಲ, ಇಲಾಖೆಯ ವಸತಿಗೃಹ ವಾಸಿಸಲು ಯೋಗ್ಯವಿಲ್ಲದ ಕಾರಣ ಚನ್ನಗಿರಿ ಪೊಲೀಸ್ ಅಧಿಕಾರಿಗಳು ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ.

ತಾಲೂಕಿನ ಪೊಲೀಸ್ ಇಲಾಖೆಗೆ ಸೇರಿದ ಸ್ಥಳದಲ್ಲಿ ಎಲ್ಲ ಸೌಕರ್ಯ ಇರುವ ಸುಸಜ್ಜಿತ 8 ವಸತಿಗೃಹ ನಿರ್ವಿುಸಲಾಗಿದೆ. ಅದರಲ್ಲಿ ಸರ್ಕಲ್ ಇನ್ಸ್​ಸ್ಪೆಕ್ಟರ್, ಸಬ್ ಇನ್ಸ್​ಸ್ಪೆಕ್ಟರ್ ಹಾಗೂ ಅಸಿಸ್ಟೆಂಟ್ ಇನ್ಸ್​ಸ್ಪೆಕ್ಟರ್​ಗಳಿಗೆ ಕಟ್ಟಿರುವ ಮನೆಗಳು ಪ್ರಸ್ತುತ ವಾಸ ಮಾಡಲು ಯೋಗ್ಯವಾಗಿಲ್ಲ.

ಪೊಲೀಸ್ ಕ್ವಾರ್ಟರ್ಸ್ 60 ವರ್ಷ ಹಳೆಯದಾಗಿದ್ದು, ಇಲಾಖೆ ಅಧಿಕಾರಿಗಳು ವರ್ಗಾವಣೆಯಾಗಿ ಬಂದರೆ ಖಾಲಿ ಇರುವ ಮನೆಗೆ ಸುಣ್ಣಬಣ್ಣ ಬಳಿದು ವಾಸವಿರುತ್ತಿದ್ದರು. ಆದರೆ ಇತ್ತೀಚಿನ ವರ್ಷದಲ್ಲಿ ಅಲ್ಲಿ ವಾಸ ಮಾಡಲಾಗದೆ ವರ್ಗಾವಣೆಯಾಗುವವರೆಗೆ ಬಾಡಿಗೆ ಮನೆಯಲ್ಲಿದ್ದು ಹೋಗುತ್ತಾರೆ.

2021ರ ವರೆಗೆ ವಾಸವಿದ್ದ ವಸತಿಗೃಹಗಳಲ್ಲಿ ಪ್ರಸ್ತುತ ಯಾರೂ ಇಲ್ಲದೆ ಗಿಡಗಂಟಿಗಳು ಬೆಳೆದು ಮನೆಯ ಗೋಡೆಗಳಲ್ಲಿ ಬಿರುಕು ಮೂಡಿ ಸಂಪೂರ್ಣ ಹಾಳಾಗಿವೆ. ಒಂದು ಸಮಯದಲ್ಲಿ ವಸತಿಗೃಹದ ಮುಂದಿನ ಖಾಲಿ ಜಾಗದಲ್ಲಿ ಮಕ್ಕಳು, ಕ್ರೀಡಾಪಟುಗಳು ವಾಯುವಿಹಾರ ಮಾಡುತ್ತಿದ್ದರು. ಆದರೆ ಈಗ ಅಲ್ಲಿಗೆ ಹೋಗಲು ಭಯಪಡುತ್ತಾರೆ.

ಪಾಳು ಬಿದ್ದ ವಸತಿಗೃಹದಲ್ಲಿನ ಹಾವು, ಇಲಿ, ಹೆಗ್ಗಣ ದೂರದ ಮನೆಗಳಿಗೆ ಹೋಗುತ್ತಿವೆ. ಸುತ್ತಮುತ್ತ ಬೆಳೆದ ಗಿಡಗಂಟಿಗಳಿಂದ ಮನೆ ಇರುವುದೇ ಅನುಮಾನ ಮೂಡುತ್ತದೆ. ಅಲ್ಲದೆ ರಾತ್ರಿ ವೇಳೆ ಕ್ವಾರ್ಟರ್ಸ್ ಬಳಿ ಹೋಗಲು ಸಾರ್ವಜನಿಕರು ಹೆದರುವ ಸ್ಥಿತಿ ಎದುರಾಗಿದೆ.

ಕ್ವಾರ್ಟರ್ಸ್ ಬಳಿ ಸಾರ್ವಜನಿಕರು ಅರ್ಜಿ ನೀಡಲು ಬರುತ್ತಿದ್ದರಲ್ಲದೆ, ಹೊಸ ವರ್ಷದಂದು ಅಧಿಕಾರಿಗಳಿಗೆ ಗೌರವ ಸಲ್ಲಿಸಲು ಕೇಕ್ ಮತ್ತು ಹೂಗುಚ್ಛ ನೀಡಿ ಸಂಭ್ರಮಿಸುವುದೆಲ್ಲ ಈಗ ಮಾಯವಾಗಿದೆ.

ಪೊಲೀಸ್ ವಸತಿಗೃಹಗಳು ಹಳೆಯವಾಗಿದ್ದು, ವಾಸವಿರಲು ಯೋಗ್ಯವಾಗಿಲ್ಲ. ಹೀಗಾಗಿ ಅಧಿಕಾರಿಗಳು ವಿಧಿ ಇಲ್ಲದೆ ಬೇರೆಡೆ ಮನೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯದಲ್ಲಿಯೇ ಹೊಸ ಮನೆಗಳು ಆಗುವ ಸಾಧ್ಯತೆ ಇದೆ. | ಸ್ಯಾಮ್ ವರ್ಗೀಸ್, ಎಸಿಪಿ ಪೊಲೀಸ್ ಇಲಾಖೆ, ಚನ್ನಗಿರಿ.

ಕ್ವಾರ್ಟರ್ಸ್ ಕಾಣದ ರೀತಿಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಇದರ ಮುಂದೆ ಮಕ್ಕಳು ಆಟವಾಡುವಾಗ ಹಾವುಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ವಸತಿಗೃಹಗಳ ಸುತ್ತಮುತ್ತ ವಾಸಿಸಲು ಭಯವಾಗುತ್ತದೆ. ಅಲ್ಲಿ ಸ್ವಚ್ಛತೆ ಮಾಡಿಸಬೇಕು. | ವಸತಿಗೃಹದ ಪಕ್ಕದ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net