

ಮುದಗಲ್: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಕುಂಬಾರ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಸಜ್ಜಲಾಂಬೆಯ ಪುರಾಣ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಐತಿಹಾಸಿಕ ಮುದಗಲ್ ಉತ್ಸವ, ತಾಲೂಕು ಘೋಷಣೆ ಸೇರಿದಂತೆ ಶಾಶ್ವತ ಕುಡಿವ ನೀರಿನ ಯೋಜನೆಗಳ ಅನುಷ್ಠಾನದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಸರ್ಕಾರದ ಬಳಿ ಯಾವುದೇ ಅನುದಾನವಿಲ್ಲದ ಕಾರಣ ಎಲ್ಲವೂ ವಿಳಂಬವಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಜ್ಜಲಗುಡ್ಡ ದೊಡ್ಡ ಬಸವಾರ್ಯ ಶ್ರೀಗಳು ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಪ್ರಮುಖರಾದ ಗುರುಬಸ್ಸಪ್ಪ ಸಜ್ಜನ, ಮುದಕಪ್ಪ ನಾಯಕ, ವೆಂಕನಗೌಡ ಐದನಾಳ, ಸಿದ್ದಯ್ಯ ಸ್ವಾಮಿ ಮೇಗಳಪೇಟೆ, ಕರಿಯಪ್ಪ ಯಾದವ್, ನಾಗರಾಜ ತಳವಾರ, ಸಂತೋಷ ಸುರಪುರ, ಮಂಜುನಾಥ ನಂದವಾಡಗಿ, ಕಾಂತಕುಮಾರ ಪತ್ತಾರ, ಉದಯ ಕುಮಾರ ಕಮ್ಮಾರ ಇತರರಿದ್ದರು.