

ಹಾನಗಲ್ಲ: ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಾಗಿರುವ ಜತೆಗೆ, ಕರ್ನಾಟಕದಲ್ಲಿ ಜಿಎಸ್‌ಟಿ ಸಂಗ್ರಹ ಏರಿಕೆಯಾಗಿದೆ. ಜಿಡಿಪಿ ಸಹ ಗಮನಾರ್ಹ ಸುಧಾರಣೆ ಕಂಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಯುವ ಮತ್ತು ಮಹಿಳಾ ಸಬಲೀಕರಣದಲ್ಲಿ ಗ್ಯಾರಂಟಿ ಯೋಜನೆಗಳ ಪಾತ್ರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಬಂಡವಾಳ ಹೂಡಿಕೆ ವಿಚಾರದಲ್ಲಿ ಕರ್ನಾಟಕ ಇದೀಗ ಗುಜರಾತ್ ರಾಜ್ಯವನ್ನು ಹಿಂದಿಕ್ಕಿದ್ದು, ರಾಜ್ಯಕ್ಕೆ ಹೂಡಿಕೆದಾರರನ್ನು ಸೆಳೆಯುತ್ತಿದೆ. ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇ.12 ರಷ್ಟು ಹೆಚ್ಚಾಗಿದೆ. ನಿರುದ್ಯೋಗ ಪ್ರಮಾಣ ಶೇ.4.3 ರಿಂದ ಶೇ.2.4 ಕ್ಕೆ ಇಳಿದಿದೆ. ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಯೋಜನೆಗಳೆಂದು ಟೀಕಿಸುತ್ತಿದ್ದವರೆ ಈಗ ಗಟ್ಟಿ ಯೋಜನೆಗಳೆಂದು ಅರಿತು ಬೇರೆ ಬೇರೆ ರಾಜ್ಯಗಳಲ್ಲಿ ನಕಲು ಮಾಡುತ್ತಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಹಲವು ಕಾರಣಗಳಿಂದ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ತಲೆದೋರಿದೆ. ಬಡ ಮತ್ತು ಮಧ್ಯಮ ವರ್ಗಗಳಿಗೆ ಸೇರಿದ ಜನತೆಯನ್ನು ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದಲೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಮಳೆಯಾಶ್ರಿತ ಪ್ರದೇಶ ನಮ್ಮ ಜಿಲ್ಲೆಯದಾಗಿರುವುದರಿಂದ ಯಾವುದೇ ಖಚಿತ ಆದಾಯವಿಲ್ಲ. ಹಾಗಾಗಿ ಹಸಿವಿನಿಂದ ಯಾರೊಬ್ಬರೂ ಬಳಲಬಾರದು ಎನ್ನುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಗಳ ಲಾಭ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ಸಿಗುತ್ತಿರುವ ಕಾರಣ ಅಂಥ ಕುಟುಂಬಗಳಲ್ಲಿ ನೆಮ್ಮದಿ ಕಾಣುತ್ತಿದ್ದೇವೆ. ಹಾವೇರಿ ಜಿಲ್ಲೆಯೊಂದಕ್ಕೆ ಪ್ರತಿವರ್ಷ ಗ್ಯಾರಂಟಿ ಯೋಜನೆಗಳಿಂದ ಸಾವಿರ ಕೋಟಿಗೂ ಅಧಿಕ ಆರ್ಥಿಕ ನೆರವು ಲಕ್ಷಾಂತರ ಕುಟುಂಬಗಳಿಗೆ ಸಿಗುತ್ತಿದೆ ಎಂದರು.
ಸಮಿತಿಯ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿದರು. ಪ್ರಾಚಾರ್ಯ ಡಾ.ಚನ್ನಬಸಪ್ಪ ಕುಮ್ಮೂರ, ಹೆಸ್ಕಾಂ ಎಇಇ ಎಸ್. ಆನಂದ, ಸಿಡಿಪಿಒ ನಂದಕುಮಾರ, ಸಾರಿಗೆ ಘಟಕ ವ್ಯವಸ್ಥಾಪಕ ಎಚ್.ಡಿ. ಜಾವೂರ, ಆಹಾರ ಇಲಾಖೆಯ ಎಚ್.ಸಿ.ಮಾಳಾಪೂರ, ಉದ್ಯೋಗ ಇಲಾಖೆಯ ಚೈತನ್ಯಕುಮಾರ ಮೋಹಿತೆ, ಬಿಇಒ ವಿ.ವಿ. ಸಾಲಿಮಠ, ಸಮಿತಿಯ ಸದಸ್ಯರಾದ ಲಿಂಗರಾಜ ಮಡಿವಾಳರ, ರಾಜೂ ಗಾಡಗೇರ, ಬಸನಗೌಡ ಪಾಟೀಲ, ಇರ್ಫಾನ್ ಮಿಠಾಯಿಗಾರ, ರಾಮಚಂದ್ರ ಕಲ್ಲೇರ, ಸುಮಾ ಸುಣಗಾರ, ಲಕ್ಷ್ಮೀಬಾಯಿ ಪಾಟೀಲ, ರಾಧಾ ಇಂಗಳಕಿ, ಮಂಜುಳಾ ಹುರುಳಿಕುಪ್ಪಿ, ಪದ್ಮಾ ಬೇಂದ್ರೆ, ನಗಿನಾಬಾನು ಹರವಿ, ಇತರರಿದ್ದರು.