

ವಿಜಯವಾಣಿ ಸುದ್ದಿಜಾಲ ಧಾರವಾಡ
ಅತಿಯಾದ ಮಳೆಯಿಂದ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಇತ್ತೀಚೆಗೆ ಮೃತಪಟ್ಟ ಯಲ್ಲಪ್ಪ ಹಿಪ್ಪಿಯವರ ಮನೆಗೆ ಭಾನುವಾರ ಮಧ್ಯಾಹ್ನ ಕೇಂದ್ರ ಸಚಿವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಯಲ್ಲಪ್ಪ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರಧನ 5 ಲಕ್ಷ ರೂ.ಗಳನ್ನು ಈಗಾಗಲೇ ನೀಡಲಾಗಿದೆ. ಗಾಯಾಳುಗಳಿಗೆ ಅಗತ್ಯ ವೈದ್ಯಕಿಯ ಚಿಕಿತ್ಸೆ ನೀಡಲಾಗಿದೆ. ಅವರಿಗೆ ವಿಧವಾ ವೇತನ ಮತ್ತು ರಾಷ್ಟ್ರೀಯ ಕೌಟುಂಬಿಕ ಯೋಜನೆ ಅಡಿ ಆರ್ಥಿಕ ನೆರವು, ಸೌಲಭ್ಯ ನೀಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ನೆರವಿನಲ್ಲಿ ಗ್ರಾಮ ಪಂಚಾಯಿತಿಯಿಂದ ತಕ್ಷಣ ಹಿಪ್ಪಿಯವರ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಬೇಕು. ಅತಿ ಮಳೆಯಿಂದ ಮನೆ ಹಾನಿ ಆಗಿರುವ ಜನರಿಗೆ ಮನೆ ದುರಸ್ತಿ ಅಥವಾ ನೂತನ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು..
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ, ಮಾಜಿ ಶಾಸಕ ಅಮೃತ ದೇಸಾಯಿ, ತಹಸೀಲ್ದಾರ ಡಾ.ಡಿ.ಎಚ್.ಹೂಗಾರ, ಇತರರು ಇದ್ದರು.