

ಲಕ್ಷ್ಮೇಶ್ವರ: ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಯೋಜನೆಯಿಂದ ಹೊರಗುಳಿದ ಜನರನ್ನು ಗುರುತಿಸಿ, ಅವರಿಗೆ ಸೌಲಭ್ಯ ದೊರಕಿಸಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಜನರಿಗೆ ಗ್ಯಾರಂಟಿಗಳನ್ನು ಸರಿಯಾಗಿ ಮುಟ್ಟಿಸಲು ಸರ್ಕಾರದ ಆದೇಶ ಪ್ರಕಾರ ತಾಪಂ ಕಚೇರಿಯಲ್ಲಿ ಕಚೇರಿ ತೆರೆಯಲಾಗಿದೆ. ಸಾರ್ವಜನಿಕರಿಗೆ ಸಮಸ್ಯೆಗಳು ಏನೇ ಇದ್ದರೂ ಬಂದು ಅರ್ಜಿ ಸಲ್ಲಿಸಬಹುದು. ಅಧಿಕಾರಿಗಳ ಬೆನ್ನೆಲುಬಾಗಿ ಸಮಿತಿ ಕೆಲಸ ಮಾಡಲಿದೆ. ಐದು ಗ್ಯಾರಂಟಿ ಯೋಜನೆಗಳ ಮಾಹಿತಿ ಪಡೆಯಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ತಾಲೂಕಿನಲ್ಲಿ ಬಾಕಿ ಉಳಿದಿರುವ 1,545 ಜನರ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಿ, ಯೋಜನೆ ತಲುಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಂತ್ರಿಕ ಕಾರಣದಿಂದ ಯೋಜನೆಯಿಂದ ಹೊರಗುಳಿದ ಮಹಿಳೆಯರಿಗೆ ಗೃಹಲಕ್ಷ್ಮಿ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು. ಯುವನಿಧಿ ಯೋಜನೆ ಬಗ್ಗೆ ಪದವಿ ಕಾಲೇಜಗಳಲ್ಲಿ ಭಿತ್ತಿಪತ್ರವನ್ನು ಅಂಟಿಸುವ ಮೂಲಕ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಶಾಲಾ ಮಕ್ಕಳಿಗೆ ಬಸ್ ಸೌಲಭ್ಯದಲ್ಲಿ ಅಡಚಣೆ ಆಗದಂತೆ ಘಟಕದ ವ್ಯವಸ್ಥಾಪಕರು ಕ್ರಮ ವಹಿಸಬೇಕು. ಶಾಲೆಯ ಮಕ್ಕಳಿಗೆ ಮತ್ತು ಉದ್ಯೋಗಕ್ಕೆ ತೆರಳುವ ಜನರಿಗೆ ಅನುಕೂಲವಾಗುವಂತೆ ಆಯಾ ಊರುಗಳಿಗೆ ವಿವಿಧ ಅವಧಿಗಳಲ್ಲಿ ಬಸ್ ಓಡಿಸುವ ಸಮಯ ಬದಲಾವಣೆ ಮಾಡಿಕೊಂಡರೆ ಸೂಕ್ತ ಎಂದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕುಡಿದು ವಾಹನ ಚಾಲನೆ ಮಾಡುವ ಚಾಲಕರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಗಮನ ತಂದು ಅಮಾನತಿಗೆ ಕ್ರಮ ವಹಿಸಿ, ಗೃಹಜ್ಯೋತಿಗೆ ನೋಂದಣಿ ಮಾಡದವರ ಮನೆಗೆ ತೆರಳಿ ಕ್ರಮ ವಹಿಸಬೇಕು ಎಂದರು.
ತಾಪಂ ಇಒ ಕೃಷ್ಣಪ್ಪ ಧರ್ಮರ ಮಾತನಾಡಿ, ಅರ್ಹರಿಗೆ ಯೋಜನೆ ತಲುಪಿಸಲು ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಬೇಕು. ಸರ್ಕಾರಕ್ಕೆ ಮುಜಗರ ತರುವಂತಹ ಕೆಲಸ ಬೇಡ. ಜನರೊಂದಿಗೆ ಬೆರೆತು ಕೆಲಸ ಮಾಡಿ ಸರಿಯಾಗಿ ವರದಿ ಒಪ್ಪಿಸಿ ಎಂದರು.
ಸಮಿತಿ ಸದಸ್ಯರಾದ ಜಯಮ್ಮ ಕಳ್ಳಿ, ಸಿದ್ದಲಿಂಗೇಶ ರಗಟಿ, ಕಾರ್ತಿಕ ಡೊಡ್ಡಮನಿ, ಖಾದರಸಾಬ್ ರಿತ್ತಿ, ಕಲ್ಲಪ್ಪ ಗಂಗಣ್ಣವರ, ರಾಜು ಕೇರೆಕೊಪ್ಪದ, ಶಶಿಕಲಾ ಬಡಿಗೇರ, ಹಸನ್ ಜಂಗ್ಲಿ ಅವರು ಸಲಹೆ-ಸೂಚನೆ ನೀಡಿದರು.
ಗ್ಯಾರಂಟಿ ಯೋಜನೆ ತಲುಪಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿಡಿಪಿಒ ಅನ್ನಪೂರ್ಣಾ ಹಳ್ಳಿಗುಡಿ, ಯುವನಿಧಿ ಯೋಜನೆಯ ವಿನಾಯಕ ನೀರಲಕೇರಿ, ಹೆಸ್ಕಾಂನ ಆಂಜನೇಯಪ್ಪ, ಸಾರಿಗೆ ಘಟಕ ವ್ಯವಸ್ಥಾಪಕಿ ಸವಿತಾ ಆದಿ, ಆಹಾರ ಇಲಾಖೆಯ ಜಗದೀಶ ಕುರುಬರ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ತಾಪಂ ಸಭಾಂಗಣದ ಕೊಠಡಿಯಲ್ಲಿ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರ ಕಚೇರಿ ಉದ್ಘಾಟಿಸಲಾಯಿತು.