

ಮುಂಡರಗಿ: ಖಾಸಗಿ ಕಂಪನಿ ಪೂರೈಸಿದ ಸೂರ್ಯಕಾಂತಿ ಕಳಪೆ ಬೀಜದಿಂದಾಗಿ ಬೆಳೆ ಹಾಳಾಗಿದ್ದು, ಸೂಕ್ತ ಪರಿಹಾರ ನೀಡುವ ಕುರಿತು ತಹಸೀಲ್ದಾರ್ ಕಾರ್ಯಾಲಯದಲ್ಲಿ ಖಾಸಗಿ ಕಂಪನಿ ವ್ಯವಸ್ಥಾಪಕ ಹಾಗೂ ಅಧಿಕಾರಿಗಳು ರೈತರೊಂದಿಗೆ ಸೋಮವಾರ ಸಭೆ ನಡೆಸಿದರು.
ಗ್ರೇಡ್-2 ತಹಸೀಲ್ದಾರ್ ಕೆ. ರಾಧಾ, ಖಾಸಗಿ ಕಂಪನಿ ವ್ಯವಸ್ಥಾಪಕ ಸುಚಿತ್, ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶಮೂರ್ತಿ ಅವರು ರೈತರೊಂದಿಗೆ ಚರ್ಚಿಸಿದರು. ಬೀಜ ಕಳಪೆಯಾಗಿದ್ದರಿಂದ ಈಗ ಬೆಳೆ ಹಾಳಾಗಿದೆ. ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು.
ಪ್ರತಿಕ್ರಿಯಿಸಿದ ಸುಚಿತ್ ಅವರು, ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ಕೊಡುವುದರ ಬಗ್ಗೆ ಕ್ರಮ ವಹಿಸಲಾಗುವುದು ಎಂದರು. ಈಗಾಗಲೆ ಕೃಷಿ ಇಲಾಖೆ, ವಿಜ್ಞಾನಿಗಳ ತಂಡ ಪರಿಶೀಲಿಸಿ ವರದಿ ತಯಾರಿಸಿದೆ. ವರದಿ ಆಧಾರದ ಮೇಲೆ ಪರಿಹಾರ ಘೋಷಿಸಬೇಕು ಎಂದು ರೈತರು ಪಟ್ಟು ಹಿಡಿದರು.
ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ರೈತರು ತಹಸೀಲ್ದಾರ್ ಕಾರ್ಯಾಲಯದ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈಗಾಗಲೆ ಮೂರು ಬಾರಿ ಪ್ರತಿಭಟನೆ ನಡೆಸಿದರೂ ಜಿಲ್ಲಾಧಿಕಾರಿಗಳು ರೈತರ ಬಗ್ಗೆ ನಿರ್ಲಕ್ಷೃ ಮಾಡಿದ್ದಾರೆ. ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಅಧಿಕಾರಿಗಳೇ ನೇರಹೊಣೆ ಎಂದು ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಎಚ್ಚರಿಸಿದರು.
ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡ ಅವರು ಮತ್ತೊಮ್ಮೆ ರೈತರೊಂದಿಗೆ ಚರ್ಚಿಸಿದರು. ಒಂದು ವಾರದಲ್ಲಿ ರೈತರಿಗೆ ಸೂರ್ಯಕಾಂತಿ ಬೀಜದ ಪ್ರತಿ 2ಕೆಜಿಯ 1 ಪ್ಯಾಕೇಟ್‌ಗೆ 5 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ಕರವೇ ಜಿಲ್ಲಾಧ್ಯಕ್ಷ ಶರಣು ಗೋಡಿ, ರೈತರಾದ ಚಂದ್ರಕಾಂತ ಉಳ್ಳಾಗಡ್ಡಿ, ಪ್ರಕಾಶ ಸಜ್ಜನರ, ಎಚ್.ಬಿ. ಕುರಿ, ಚಂದ್ರಹಾಸ ಉಳ್ಳಾಗಡ್ಡಿ, ಶರಣಪ್ಪ ಕಂಬಳಿ, ಅಂದಪ್ಪ ಕುರಿ, ಆರ್.ಎಸ್. ಕುರಿ, ಬೀರಪ್ಪ ಮಲಾರ್ಜಿ, ಮುತ್ತು ಬಳ್ಳಾರಿ, ದೇವಪ್ಪ ಕುರಿ, ಸುರೇಶ ಸಜ್ಜನರ, ಬಸವರೆಡ್ಡಿ ಜಚರಡ್ಡಿ, ಬಸಯ್ಯ ಎಲಿಗಾರ, ಚನ್ನಪ್ಪ ಮೇಟಿ ಇತರರು ಇದ್ದರು.