

ಮಳವಳ್ಳಿ: ಗ್ಯಾರಂಟಿಗಳ ಮೂಲಕ ಜನರ ಕಣ್ಣಿಗೆ ಕಾಂಗ್ರೆಸ್ ಸರ್ಕಾರ ಮಂಕುಬೂದಿ ಎರಚುತ್ತಿದ್ದು, ಮಂಡ್ಯ ಜನರಿಗೆ ಕಾವೇರಿ ನೀರಿನ ಗ್ಯಾರಂಟಿ ಕೊಡಲಿ ಎಂದು ಲೋಕಸಭಾ ಮೈತ್ರಿ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಬೆಳಕವಾಡಿಯಲ್ಲಿ ಮಂಗಳವಾರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇವಲ ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಮತ ಯಾಚನೆ ಮಾಡುತ್ತಿದೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಸರ್ಕಾರವೇ ಸೃಷ್ಟಿಸಿರುವ ಕೃತಕ ಬರಗಾಲದಿಂದ ಕಬ್ಬು, ಭತ್ತದ ಬೆಳೆ ಒಣಗಿ ಹೋಗಿದೆ. ಕಾವೇರಿ ನೀರಿನ ವಿಚಾರದಲ್ಲಿ ಈ ಸರ್ಕಾರ ಜಿಲ್ಲೆಯ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಕರ್ನಾಟಕಕ್ಕೆ ಅವಕಾಶ ಕೊಡುವುದಿಲ್ಲ. ಕೇಂದ್ರ ಅನುಮತಿ ಕೊಡುವುದಕ್ಕೂ ಬಿಡುವುದಿಲ್ಲ ಎಂದು ಕಾಂಗ್ರೆಸ್ ಮಿತ್ರಪಕ್ಷ ತಮಿಳುನಾಡಿನ ಡಿಎಂಕೆ ಪಕ್ಷ ತನ್ನ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬರೆದುಕೊಂಡಿದೆ. ರಾಜ್ಯದ ಹಿತಾಸಕ್ತಿಗೆ ಮಾರಕವಾದ ಅನ್ಯ ರಾಜ್ಯದ ಪಕ್ಷದ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಎಚ್‌ಡಿ.ಕೆ ನೇರ ಆರೋಪ ಮಾಡಿದರು.
ಕನ್ನಡಿಗರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ಕಾಳಜಿ ಇದ್ದರೆ ತಮಿಳುನಾಡಿನವರು ಕಾವೇರಿ ನ್ಯಾಯಾಧೀಕರಣ ಹಾಕಿರುವ ತಕರಾರು ಅರ್ಜಿಗಳನ್ನು ಹಿಂಪಡೆಯಲು ಅವರ ಮಿತ್ರಪಕ್ಷದ ಮನವೊಲಿಸಲಿ. ಡಿಎಂಕೆ ನಾಯಕ ಸ್ಟಾಲಿನ್ ಅವರ ಮನವೊಲಿಸಲಿ. ಕಾಂಗ್ರೆಸ್ ಆ ಕೆಲಸ ಮಾಡಿದರೆ ಕೇಂದ್ರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ, ಅದಕ್ಕೆ ಹಣ ಬಿಡುಗಡೆ ಮಾಡಿಸುವುದು ನನ್ನ ಜವಾಬ್ದಾರಿ ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ರಾಜ್ಯಕ್ಕೆ ಬೇಕಾದ ಶಾಶ್ವತ ಕೆಲಸಗಳನ್ನು ಮಾಡುವುದು ಬಿಟ್ಟು ಅಗ್ಗದ ಕಾರ್ಯಕ್ರಮಗಳಿಗೆ ಜೋತು ಬಿದ್ದು ಜನರನ್ನು ಯಾಮಾರಿಸುವ ಮೂಲಕ ಸಾಮಾನ್ಯ ವರ್ಗದ ಜನರ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ ಎಂದು ಟೀಕಿಸಿದರು. ಕಾವೇರಿ ನೀರಿನ ಬಗ್ಗೆ ಚಕಾರ ಎತ್ತದ ಕಾಂಗ್ರೆಸ್, ಡಿಎಂಕೆ ಪ್ರಣಾಳಿಕೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಮಯಕ್ಕೆ ತಕ್ಕ ರಾಜಕಾರಣ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಅವರು ಕಿಡಿಕಾರಿದರು.
ನಿವೆಲ್ಲರೂ ನನ್ನ ಮೇಲಿಟ್ಟಿರುವ ಅಭಿಮಾನದ ಋಣವನ್ನು ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ಎಲ್ಲರ ಒತ್ತಾಯಕ್ಕೆ ಮಣಿದು ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಕೇಂದ್ರದಿಂದ ಶಾಶ್ವತ ಪರಿಹಾರ ಕಂಡುಕೊಡಬೇಕೆಂಬ ಸದುದ್ದೇಶದಿಂದ ಪ್ರಸ್ತುತ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ನಿಮ್ಮೆಲ್ಲರ ಆಶಿರ್ವಾದ ಇರಲೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ವೀರಶೈವ ಮುಖಂಡ ಆರ್.ಎಂ.ಚಂದ್ರಶೇಖರ್, ಉದ್ಯಮಿ ಬಾಣಗಹಳ್ಳಿ ಶಿವಲಿಂಗೇಗೌಡ, ಎ.ಪಿ.ದೊಡ್ಡಿ ನಾಗರಾಜು, ಭೈರೇಶ್ ಸೇರಿದಂತೆ ನೂರಾರು ಮುಖಂಡರು ಕಾಂಗ್ರೆಸ್ ತೊರೆದು ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸೇರಿದಂತೆ ಬಿಜೆಪಿ ಜೆಡಿಎಸ್ ಪಕ್ಷದ ಅನೇಕ ನಾಯಕರು ಇದ್ದರು.