ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಗ್ಯಾರಂಟಿ ಯೋಜನೆಗಳು

mysore
Published on

ಮೈಸೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಆದ್ದರಿಂದ ಈ ಯೋಜನೆಗಳಿಗೆ ಆಕ್ಷೇಪ ಸರಿಯಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿದರು.


ಕಾಯಕ ಫೌಂಡೇಷನ್ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ಸಾಧಕರಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಹೆಣ್ಣು ಮಕ್ಕಳ ಕೇಂದ್ರಿತವಾಗಿವೆ. ಈ ಯೋಜನೆಗಳಿಗೆ ಸಮಾಜದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ವಿಷಾದನೀಯ. ಮಹಿಳೆಯರು ಹಕ್ಕಿಯಂತೆ ಹಾರಾಡುವುದನ್ನು ಪುರುಷ ಪ್ರಧಾನ ವ್ಯವಸ್ಥೆ ಸಹಿಸುತ್ತಿಲ್ಲ ಎಂದರು.


ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಸರ್ಕಾರದ ಸವಲತ್ತು ಸಿಗುತ್ತಿದ್ದರೂ ಗಂಡಸರು ವಿರೋಧಿಸುತ್ತಾರೆ. ಮನೆಯ ಯಾಜಮಾನನಿಗೆ ಮಾಸಿಕ 2 ಸಾವಿರ ರೂ. ಕೊಟ್ಟಿದ್ದರೆ ಬಹುಶಃ ಆ ಹಣ ಮದ್ಯದಂಗಡಿಯಲ್ಲಿ ಖರ್ಚು ಮಾಡುತ್ತಿದ್ದರು ಎಂದು ತಿಳಿಸಿದರು.


ಯಾವತ್ತೂ ಹೆಣ್ಣು ಮಗಳೊಬ್ಬಳು ಒಬ್ಬಂಟಿಯಾಗಿ ಮಧ್ಯರಾತ್ರಿ ನಿರ್ಭಯವಾಗಿ ನಡೆದುಕೊಂಡು ಹೋದ ದಿನ ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರುತ್ತದೆ. ಕಟ್ಟುಪಾಡುಗಳಿಂದ ಅವಳನ್ನು ಕಟ್ಟಿ ಹಾಕಿದರೆ ಆಚರಣೆಗಳಿಗೆ ಅರ್ಥವಿಲ್ಲ ಎಂದು ಹೇಳಿದರು.


ಹೆಣ್ಣು ಮಕ್ಕಳು ಯಾವುದೇ ಸಂದರ್ಭದಲ್ಲೂ ಕುಗ್ಗಬಾರದು. ಜೀವನದಲ್ಲಿ ಸೋತಾಗಲೂ ಧೈರ್ಯದಿಂದ ಮುನ್ನಡೆಯಬೇಕು. ಅವಕಾಶಗಳನ್ನು ಯಾರೂ ಸೃಷ್ಟಿಸಿ ಕೊಡುವುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ತಾವೇ ಸ್ವಯಂ ಪ್ರಯತ್ನ ಮಾಡಬೇಕು. ಯಾರ ಮೇಲೂ ಅವಲಂಬಿತರಾಗದೇ ಮುನ್ನುಗ್ಗಬೇಕು ಎಂದು ಹೇಳಿದರು.


ಮನೆಯಿಂದಲೇ ಹೆಣ್ಣು-ಗಂಡು ತಾರತಮ್ಯ ನಿವಾರಣೆಯಾಗಬೇಕು. ಪಾಲಕರು ಗಂಡು ಮಕ್ಕಳಿಗೆ ಒಂದು, ಹೆಣ್ಣು ಮಕ್ಕಳಿಗೆ ಮತ್ತೊಂದು ವಾತವರಣ ನಿರ್ಮಿಸಬಾರದು. 6 ಗಂಟೆಯ ನಂತರ ಹೆಣ್ಣು ಮಕ್ಕಳು ಏಕೆ ಮನೆಯಿಂದ ಹೊರಗೆ ಹೋಗುವಂತಿಲ್ಲ. ಗಂಡು ಮಕ್ಕಳನ್ನು ಡಾನ್ ರೀತಿ ಬೆಳೆಸಿ ಹೆಣ್ಣು ಮಕ್ಕಳನ್ನು ಕಟ್ಟುಪಾಡುಗಳಿಗೆ ಸಿಲುಕಿಸುತ್ತಾರೆ. ಪಾದಪೂಜೆ ಮಾಡುವುದಕ್ಕೆ ಮತ್ತು ಮನೆ ಕೆಲಸ ಮಾಡುವುದಕ್ಕೆ ಸೀಮಿತ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಪ್ರತಿ ಹೆಣ್ಣು ಮಗುವಿಗೂ ಸಮಾನ ಅವಕಾಶ ದೊರೆಯಬೇಕು ಎಂದು ಹೇಳಿದರು.


ಸಾಲಿಗ್ರಾಮದ ಪ್ರಾಥಮಿಕ ಆರೋಗ್ಯದ ಅರಿವಳಿಕೆ ತಜ್ಞೆ ಡಾ.ದೇವಿಕಾ, ಚಿಗುರು ಆಶ್ರಮದ ಎಂ.ಎಸ್. ಸುಷ್ಮಾ, ಸರಸ್ವತಿ ಚಾರಿಟಬಲ್ ಟ್ರಸ್ಟ್ ನಿರ್ದೇಶಕಿ ಸರಸ್ವತಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಅವರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕಾಯಕ ಪತ್ರಿಕೆ ಸಂಪಾದಕಿ ಬಿ.ಕೆ.ಅರುಣ ಜ್ಯೋತಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಅಬ್ದುಲ್ ಮಲ್ಲಿಕ್, ಹುಣಸೂರು ತಾಲೂಕು ಅಧ್ಯಕ್ಷ ಜಯರಾಮೇಗೌಡ, ಉಪ ಪ್ರಾಂಶುಪಾಲೆ ಮೋಕ್ಷಾಮಾಲಾ, ಅನಂತ್‌ಕುಮಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net