

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ಬಡ ಹಾಗೂ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಇವುಗಳಿಂದ ಜನರ ಬದುಕಿನಲ್ಲಿ ಬೆಳಕು ಮೂಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಹು-ಧಾಕ್ಕೆ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುವುದರಿಂದ ಬೆಳಗ್ಗೆ, ಸಂಜೆ ಸಮಯಕ್ಕೆ ಸರಿಯಾಗಿ ಬಸ್ಗಳ ವ್ಯವಸ್ಥೆಯಾಗಬೇಕು. ಹಳ್ಳಿಗಳಲ್ಲೂ ಬಸ್ ವ್ಯವಸ್ಥೆ ಆಗಬೇಕು. ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳು, ಜೋತು ಬಿದ್ದ ತಂತಿಗಳು, ಬಾಗಿದ ಕಂಬಗಳಿಂದ ಜನರಿಗೆ ಹಾಗೂ ರೈತರಿಗೆ ತೊಂದರೆ ಆಗುತ್ತಿದೆ. ಹೆಸ್ಕಾಂ ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ಯೋಜನೆಗಳ ಬಾಕಿ ಫಲಾನುಭವಿಗಳಿಗೆ ಶೀಘ್ರ ಸೌಲಭ್ಯ ಕಲ್ಪಿಸಬೇಕು ಎಂದರು.
ಹುಬ್ಬಳ್ಳಿ ಗ್ರಾಮೀಣ ಸಂಚಾರ ವಿಭಾಗದ ವಿಭಾಗೀಯ ಅಧಿಕಾರಿ ಎಚ್.ರಾಮನಗೌಡರ, ಶಹರ ವಿಭಾಗದ ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ಅರವಿಂದ ಗದಕರ, ಗ್ರಾಮೀಣ ವಿಭಾಗದ ಇಇ ಎಂ.ಟಿ. ದೊಡಮನಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ. ಎಚ್.ಎಚ್.ಕುಕನೂರ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಬಸವಂತ ಪಿ.ಎಸ್., ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರಿ ತಮ್ಮ ಇಲಾಖೆ ಮಾಹಿತಿ ನೀಡಿದರು.
ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರಾದ ಮುರುಗಯ್ಯ ವಿರಕ್ತಮಠ, ಅರವಿಂದ ಏಗನಗೌಡರ, ಸುಧೀರ ಗೋಳಾರ, ಅಬ್ದುಲ್ ರಶೀದ್ ಬೋಳಾಬಾಯಿ, ರತ್ನಾ ತೇಗೂರಮಠ, ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಸದಸ್ಯರು, ಇತರರು ಇದ್ದರು.