ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

Guarantee Schemes Progress Review Meeting
Published on

ಮಡಿಕೇರಿ:

ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾದ ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ನವೆಂಬರ್ ತಿಂಗಳಲ್ಲಿ ‘ಗ್ಯಾರಂಟಿ ಅನುಷ್ಠಾನ ಜಾಗೃತಿ ಸಪ್ತಾಹ’ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ಸರ್ಕಾರ ಗೃಹ ಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಈ ಗ್ಯಾರಂಟಿ ಯೋಜನೆಗಳಿಂದ ಬಿಪಿಎಲ್ ಕುಟುಂಬದವರು ಯಾವುದೇ ಕಾರಣಕ್ಕೂ ವಂಚಿತರಾಗಬಾರದು, ಅರ್ಹರೆಲ್ಲರಿಗೂ ಗ್ಯಾರಂಟಿ ಯೋಜನೆಗಳು ತಲುಪಬೇಕು. ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ಗ್ಯಾರಂಟಿ ಅನುಷ್ಠಾನ ಸಪ್ತಾಹವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಗ್ಯಾರಂಟಿ ಅನುಷ್ಠಾನ ಜಾಗೃತಿ ಸಪ್ತಾಹ ಸಂಬಂಧ ರಾಜ್ಯ ಅಧ್ಯಕ್ಷರ ಗಮನಕ್ಕೆ ತಂದು, ರಾಜ್ಯಾದ್ಯಂತ ಈ ಕಾರ್ಯಕ್ರಮ ಆಯೋಜಿಸಲು ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು ಎಂದು ಪುಷ್ಪಾ ಅಮರನಾಥ್ ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳು ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬರಿಗೂ ತಲುಪಬೇಕು. ಆ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ತಾ.ಪಂ.ಇಒಗಳು, ಪಿಡಿಒಗಳು ಗ್ರಾಮ ಆಡಳಿತ ಅಧಿಕಾರಿಗಳು, ಸೇರಿದಂತೆ ಹಲವು ಇಲಾಖೆಗಳ ಜೊತೆಗೂಡಿ ಮನೆ ಮನೆ ಸಮೀಕ್ಷೆ ಮಾಡಿ ಗ್ಯಾರಂಟಿ ಯೋಜನೆಯಿಂದ ಯಾರು ದೂರವಿದ್ದಾರೆ. ಗ್ಯಾರಂಟಿ ಯೋಜನೆ ಇದುವರೆಗೆ ಪಡೆಯದಿರಲು ಕಾರಣವೇನು, ಮತ್ತಿತರ ಬಗ್ಗೆ ಮಾಹಿತಿ ಪಡೆಯಬೇಕು. ಜೊತೆಗೆ ಅಗತ್ಯ ದಾಖಲೆಗಳು ಇಲ್ಲದಿರುವವರು ಸಹ ಇದ್ದು, ಅಂತಹ ಕುಟುಂಬಗಳಿಂದ ಮಾಹಿತಿ ತಿಳಿದು, ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಗ್ಯಾರಂಟಿ ಯೋಜನೆ ಪ್ರಗತಿ ಸಾಧಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷರು ನಿರ್ದೇಶನ ನೀಡಿದರು.

ನವೆಂಬರ ತಿಂಗಳ ಮೊದಲ ವಾರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು, ನಂತರ ಸಪ್ತಾಹ ಹಮ್ಮಿಕೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ಎಲ್ಲಾ ಹಂತದ ಇಲಾಖಾ ಅಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದರು.

‘ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಈ ಕಾರ್ಯಕ್ರಮಗಳನ್ನು ಪ್ರತಿ ಹಂತದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು ಎಂದು ಪುಷ್ಪಾ ಅಮರನಾಥ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.’
ಸಾರ್ವಜನಿಕರ ಸ್ಥಳಗಳು ಸೇರಿದಂತೆ ಕಚೇರಿಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಕವನ್ನು ಅಳವಡಿಸಬೇಕು. ಇದರಿಂದ ಗ್ಯಾರಂಟಿ ಯೋಜನೆ ಪಡೆಯಲು ಸಹಕಾರಿಯಾಗಲಿದೆ ಎಂದು ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರು ಅಭಿಪ್ರಾಯಪಟ್ಟರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಗ್ಯಾರಂಟಿ ಯೋಜನೆಯ ಪ್ರಮುಖರಾದ ಪ್ರಶಾಂತ್, ಶರಿ ಗಿರೀಶ, ಕೆ.ಸಿ.ಭೀಮಯ್ಯ, ನಾಸೀರ್, ಅಣ್ಣಯ್ಯ, ಕೆ.ಎಂ.ಬಸೀರ್, ಮುಸ್ತಫ, ಧನ್ಯ, ಕೆ.ಜಿ.ಫೀಟರ್, ಕಾಂತರಾಜು, ಮಂದ್ರೀರ ಮೋಹನ್ ದಾಸ್, ಜಾನ್ಸನ್ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net