ಗೃಹಲಕ್ಷ್ಮೀ ಯೋಜನೆಯಲ್ಲಿನ ಸಮಸ್ಯೆ ಪರಿಹರಿಸಿ: ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಸೂಚನೆ

Guarantee Scheme Progress Review Meeting Mandya
Published on

ಮಂಡ್ಯ: ಪಂಚ ಗ್ಯಾರಂಟಿ ಯೋಜನೆ ಪೈಕಿ ಗೃಹಲಕ್ಷ್ಮೀ ಯೋಜನೆಯಲ್ಲಿ ಹೆಚ್ಚಾಗಿ ಸಮಸ್ಯೆಗಳು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪೈಕಿ 12,000 ಮಹಿಳೆಯರಿಗೆ ಕಳೆದ ಬಾರಿ ಹಣ ತಲುಪಿಲ್ಲವೆಂದು ಮಾಹಿತಿ ಬಂದಿದೆ. ಈ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದರು.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಫೆಬ್ರವರಿ ಮಾಹೆಯಿಂದ ನಗದು ಬದಲು ಅಕ್ಕಿ ನೀಡಲಾಗುತ್ತಿದೆ. ಪ್ರತಿ ಮಾಹೆಯಲ್ಲಿ ಸಾರ್ವಜನಿಕರಿಗೆ ವಿತರಿಸುವ ಅಕ್ಕಿ ಮತ್ತು ರಾಗಿಯ ಅಂಕಿ-ಅಂಶ ವರದಿಯನ್ನು ಮುಂದಿನ ಸಭೆಗಳಲ್ಲಿ ಸಲ್ಲಿಸಬೇಕು. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 2023ರ ಜೂನ್ ಮಾಹೆಯಿಂದ 2025ರ ಆಗಸ್ಟ್‌ವರೆಗೆ ಲಕ್ಷಾಂತರ ಮಹಿಳೆಯರು ಉಚಿತ ಟಿಕೆಟ್ ಪಡೆದು ಸಂಚರಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೆಲವೆಡೆ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲವೆನ್ನುವ ದೂರು ಬರುತ್ತಿದೆ. ಇನ್ನು ಮುಂದೆ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದರು.

ಗೃಹಜ್ಯೋತಿ ಯೋಜನೆಯಡಿ 2025ರ ಏಪ್ರಿಲ್ ಮಾಹೆಯಿಂದ ಆಗಸ್ಟ್‌ವರೆಗೆ ಗ್ರಾಹಕರು 10.1 ಕೋಟಿ ಯೂನಿಟ್‌ಗಳಷ್ಟು ವಿದ್ಯುತ್ ಬಳಸಿದ್ದು, 98.96 ಕೋಟಿ ರೂ ವೆಚ್ಚವಾಗಿದೆ. ಈಗಾಗಲೇ ಯುವನಿಧಿಯಡಿ ನೋಂದಣಿಯಾಗಿರುವ ಫಲಾನುಭವಿಗಳು ಯುವ ನಿಧಿ ಪ್ಲಸ್ ಯೋಜನೆಯ ತರಬೇತಿ ಸೌಲಭ್ಯ ಪಡೆಯಬಹುದು. ಮುಖ್ಯವಾಗಿ ಯುವನಿಧಿ ಪ್ಲಸ್‌ನಡಿ ಕಳೆದ ಬಾರಿಗಿಂತಲೂ ಈ ಬಾರಿ ನೋಂದಣಿ ಹೆಚ್ಚಿಸಿ. ಸರ್ಕಾರದ ನೂತನ ಯೋಜನೆಯಾದ ಯುವ ನಿಧಿ ಪ್ಲಸ್ ಕುರಿತು ಕಾಲೇಜಿನಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮ ನಡೆಸಿ. ಪದವಿ, ಇಂಜಿನಿಯರಿಂಗ್ ಮತ್ತು ಡಿಪ್ಲೊಮೋ ವ್ಯಾಸಂಗ ಮಾಡಿ ಉದ್ಯೋಗವಿಲ್ಲದ ಯುವ ಜನತೆಯನ್ನು ಜಿಲ್ಲೆಯಲ್ಲಿ ಗುರುತಿಸಿ ಅವರ ವ್ಯಾಸಂಗಕ್ಕೆ ತಕ್ಕಂತೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್, ಪ್ರಾಧಿಕಾರದ ಉಪಾಧ್ಯಕ್ಷರಾದ ಪ್ರಶಾಂತ್‌ಬಾಬು, ರಾಜೇಂದ್ರ ಪ್ರಸಾದ್, ಸದಸ್ಯ ಮಹಮ್ಮದ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ನವೀನ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net