ಆರ್ಥಿಕವಾಗಿ ಸದೃಢರಾಗಲು ಗೃಹಲಕ್ಷ್ಮೀ ಸಹಕಾರಿ: ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಹೇಳಿಕೆ

Guarantee Scheme Progress Review Meeting Mandya
Published on

ಮಂಡ್ಯ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಬಡ ಜನರ ಜೀವನಮಟ್ಟ ಸುಧಾರಣೆ ಕಂಡಿದೆ. ಅದರಲ್ಲೂ ಗೃಹಲಕ್ಷ್ಮೀ ಹಾಗೂ ಶಕ್ತಿಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಿಂದ ಕೂಲಿ, ಕಾರ್ಮಿಕರು ಹಾಗೂ ಬಡವರಿಗೆ ಅನುಕೂಲವಾಗುತ್ತಿದೆ. ಫೆಬ್ರವರಿ ಹಾಗೂ ಮಾರ್ಚ್ ಮಾಹೆಗೆ ಸಂಬಂಧಿಸಿದಂತೆ ಬಾಕಿಯಿರುವ ಹಣವನ್ನು ಫಲಾನುಭವಿಗಳಿಗೆ ಒದಗಿಸಲು ಕ್ರಮ ಕೈಗೊಳ್ಳಿ ಎಂದರು.

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ. ಅರ್ಹ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿಲ್ಲದಿದ್ದರೆ ಅವರ ಮಾಹಿತಿ ಸಂಗ್ರಹಿಸಿ ತಾಲೂಕುವಾರು ವರದಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರು ಕಳೆದ ಮಾಹೆ ಪಡಿತರ ಅಂಗಡಿಯಿಂದ ಪಡೆದ ರಾಗಿಯಲ್ಲಿ ಹೆಚ್ಚು ದೂಳು ಇರುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ಪಡಿತರ ಅಂಗಡಿಯಲ್ಲಿ ಅಕ್ಕಿ ಮತ್ತು ರಾಗಿಯನ್ನು ಸಾರ್ವಜನಿಕರಿಗೆ ಒದಗಿಸುವ ಮೊದಲು ಪರಿಶೀಲಿಸಬೇಕು. ಅನ್ನಭಾಗ್ಯ ಯೋಜನೆಯಡಿ 2023ರ ಜುಲೈ ನಿಂದ 2024 ರ ಡಿಸೆಂಬರ್‌ವರೆಗೆ 73,50,911 ಫಲಾನುಭವಿಗಳು ಪ್ರತಿಫಲ ಪಡೆದಿದ್ದು, ಒಟ್ಟು 403 ಕೋಟಿ ರೂ ಅನುದಾನ ಬಿಡುಗಡೆಯಾಗಿರುತ್ತದೆ. ಅಧಿಕಾರಿಗಳು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಒದಗಿಸಿರುವ ಅಕ್ಕಿ, ರಾಗಿಯ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 2025 ರ ಏಪ್ರಿಲ್ನಿಂದ ಜೂನ್‌ವರೆಗೆ 1,96,53,042 ಟಿಕೆಟ್ ಪಡೆದು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಒಟ್ಟು 61.96 ಕೋಟಿ ರೂ ವೆಚ್ಚವಾಗಿದೆ. ಜಿಲ್ಲೆಯಲ್ಲಿ ಎಷ್ಟು ಮಾರ್ಗಗಳಿವೆ, ಎಷ್ಟು ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಒಂದು ಬಸ್ ದಿನಕ್ಕೆ ಎಷ್ಟು ಬಾರಿ ಸಂಚರಿಸುತ್ತದೆ ಎಂಬುವುದರ ತಾಲೂಕುವಾರು ಮಾಹಿತಿ ಕಲ್ಪಿಸಿ. ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಪ್ರತಿಫಲ ಪಡೆಯುತ್ತಿರುವ ಫಲಾನುಭವಿಗಳು ಮೂರು ತಿಂಗಳಿಗೊಮ್ಮೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಮಾಡುತ್ತಿರುವುದರ ಬಗ್ಗೆ ಮಾಹಿತಿ ನೀಡಿ. ನೋಂದಣಿಯಲ್ಲಿ ದೃಢೀಕರಣ ಇಲ್ಲವಾದಲ್ಲಿ ಯುವನಿಧಿ ಹಣ ಖಾತೆಗೆ ಬರುವುದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್, ಪ್ರಾಧಿಕಾರದ ಉಪಾಧ್ಯಕ್ಷರಾದ ಪ್ರಶಾಂತ್‌ಬಾಬು, ಎಸ್.ಎಚ್.ರಾಜೇಂದ್ರ, ಹನುಮಂತಯ್ಯ, ಸದಸ್ಯರಾದ ಅಜಯ್‌ಕುಮಾರ್, ಕೃಷ್ಣೇಗೌಡ, ಕುಮಾರ, ರುದ್ರಪ್ಪ, ವೀಣಾ, ಮಹಮದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net