ಮೈಸೂರಿನಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ

Guarantee Scheme Implementation Committee meeting in Mysore
Published on

ಮೈಸೂರು: ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ನಡೆಸಿ ಹಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್. ಅರುಣ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಡಿಗಳು ಇರುವಂತಹ ಪ್ರದೇಶಗಳಲ್ಲಿ ಅಧಿಕಾರಿಗಳು ಶಿಬಿರ ಆಯೋಜಿಸಿ ಅವರಿಗೆ ಗ್ಯಾರಂಟಿ ಯೋಜನೆಯ ಬಗ್ಗೆ ತಿಳಿಸಬೇಕು. ಅವರಿಗೆ ಎಲ್ಲ ಯೋಜನೆಗಳು ಲಭ್ಯವಾಗುತ್ತಾ ಇದೆಯಾ ಎಂದು ಪರಿಶೀಲನೆ ಮಾಡಬೇಕು. ಒಂದು ವೇಳೆ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿದ್ದರೆ ಅರ್ಜಿಗಳನ್ನು ಪರಿಶೀಲನೆ ಮಾಡಿ ಅವರಿಗೆ ಎಲ್ಲ ಯೋಜನೆಗಳು ತಲುಪುವಂತೆ ಮಾಡಬೇಕು ಎಂದರು.

ಬಡವರ ಪಾಲಿನ ಯೋಜನೆಗಳಲ್ಲಿ ಒಂದಾದ ಉಚಿತ ಅನ್ನಭಾಗ್ಯ ವಿತರಣೆ ಯೋಜನೆಯಲ್ಲಿ ಹಲವು ದೂರುಗಳು ಕೇಳಿ ಬಂದಿದ್ದು ಕೆಲವು ಭಾಗಗಳಲ್ಲಿ ಕಳಪೆ ಗುಣಮಟ್ಟದ ಅಕ್ಕಿ, ರಾಗಿ ಸರಬರಾಜು ಪೂರೈಕೆಯಾಗುತ್ತಿದೆ ಎಂಬ ದೂರುಗಳು ಬಂದಿರುತ್ತದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ದಾಸ್ತಾನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆ ಇನ್ನೂ ಅನೇಕ ಮಹಿಳೆಯರಿಗೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಅದರ ಬಗ್ಗೆಯೂ ಸಹ ಗಮನ ವಹಿಸಬೇಕು. ಸರಿಯಾಗಿ ಹಣ ಪಾವತಿಯಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಬೇಕು. ಅಲ್ಲದೆ ಯುವ ನಿಧಿ ಯೋಜನೆಯಲ್ಲಿ ಯಾವುದೇ ತೊಂದರೆ ಕಂಡುಬಂದಿಲ್ಲ ಆದರೂ ಸಹ ಹಾಡಿ ಜನಗಳಿಗೆ ಯುವನಿಧಿ ಸರಿಯಾಗಿ ತಲುಪುತ್ತಾ ಇದಿಯಾ ಎಂದು ಪರಿಶೀಲನೆ ನಡೆಸಿ ಯುವನಿಧಿ ಯೋಜನೆ ಎಲ್ಲ ಯುವಕ ಯುವತಿಯರಿಗೆ ಸಿಗುವಂತೆ ಮಾಡಬೇಕು. ಎಲ್ಲ ಯೋಜನೆಗಳ ಬಗ್ಗೆ ಎಲ್ಲ ಕಡೆಗಳಲ್ಲೂ ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿ ಎಲ್ಲರಿಗೂ ಯೋಜನೆಗಳು ಸಿಗುವಾಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಶಕ್ತಿ ಯೋಜನೆಯಲ್ಲಿ ಅನೇಕ ಕಡೆಗಳಿಂದ ದೂರುಗಳು ಬಂದಿದ್ದು, ಆದಷ್ಟು ಬೇಗ ದೂರುಗಳನ್ನು ಪರಿಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಗೃಹಜ್ಯೋತಿ ಯೋಜನೆಯ ಯಾವುದೇ ದೂರು ಇಲ್ಲದೆ ಅಚ್ಚುಕಟ್ಟಾಗಿ ನಡೆದುಕೊಂಡು ಬರುತ್ತಿದೆ. ಈ ಯೋಜನೆಯನ್ನು ಹೀಗೆಯೇ ಮುಂದುವರೆಸಿಕೊಂಡು ಹೋಗಿ ಎಂದು ಹೇಳಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಯಾವುದೇ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಬಾರದಂತೆ ಪ್ರತಿಯೊಂದು ಇಲಾಖೆಯವರು ಹೆಚ್ಚು ಕ್ರಮ ವಹಿಸಬೇಕು. ಪ್ರತಿಯೊಂದು ಯೋಜನೆಗಳು ಜನರಿಗೆ ತಲುಪುವಂತೆ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪ್ರೊ.ಶಿವಕುಮಾರ್, ಹುಣಸೂರು ಬಸವಣ್ಣ, ಸಾ.ಮ. ಯೋಗೇಶ್, ಸದಸ್ಯರಾದ ಲತಾ , ಕೆ.ಮಾರುತಿ, ಮಹದೇವಪ್ರಭು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net