ಪಂಚ ಗ್ಯಾರಂಟಿ ಯೋಜನೆ ಸಮರ್ಪಕ ಜಾರಿ: ಅಶೋಕ್ ಕೊಡವೂರು

udp-29-guarantee
Published on

ಉಡುಪಿ: ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಜಿಲ್ಲೆಯ ಪ್ರತಿಯೊಬ್ಬ ಅರ್ಹರೂ ಇದರ ಲಾಭ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯೋಜನೆಗೆ ಅರ್ಜಿ ಸಲ್ಲಿಸಿದ ಕೆಲವೇ ಜನರಿಗೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಲಾಭ ಪಡೆಯಲು ಸಮಸ್ಯೆಗಳು ಉಂಟಾಗಿವೆ. ಇವುಗಳನ್ನು ಆದ್ಯತೆಯ ಮೇಲೆ ಬಗೆಹರಿಸಬೇಕು. ಅರ್ಹರಿದ್ದಲ್ಲಿ ಫಲಾನುಭವಿಗಳನ್ನಾಗಿಸಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮರಣ ಹೊಂದಿದ್ದಲ್ಲಿ ಯಜಮಾನಿ ಬದಲಾವಣೆಗೆ, ಹೊಸ ಮನೆ ನಿರ್ಮಾಣವಾದಾಗ ಹೊಸ ಅರ್ಜಿಯ ಸೇರ್ಪಡೆಗೆ, ರೇಷನ್ ಕಾರ್ಡ್ ಇಲ್ಲದವರಿಗೆ ಹೊಸದಾಗಿ ರೇಷನ್ ಕಾರ್ಡ್ ಪಡೆದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತಂತ್ರಾಶದಲ್ಲಿ ಅವಕಾಶವಿರುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

7151 ಗ್ರಹಲಕ್ಷ್ಮಿ ಅರ್ಜಿ ಬಾಕಿ

ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾದವರಲ್ಲಿ ಐ.ಟಿ ಮತ್ತು ಜಿ.ಎಸ್.ಟಿ ಪಾವತಿದಾರರು ಎಂಬ ಕಾರಣಕ್ಕಾಗಿ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಐ.ಟಿ, ಜಿ.ಎಸ್.ಟಿ, ಇ-ಕೆವೈಸಿ ಮ್ಯಾಪಿಂಗ್ ಸೇರಿದಂತೆ ಒಟ್ಟು 7151 ಫಲಾನುಭಿವಿಗಳ ಅರ್ಜಿಗಳು ಬಾಕಿ ಇವೆ. ಈ ಬಗ್ಗೆ ಪರಿಶೀಲಿಸಿ ಅರ್ಹರಿದ್ದಲ್ಲಿ ಅವರಿಗೂ ಗ್ಯಾರಂಟಿ ಯೋಜನೆ ತಲುಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಡುಪಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಗ್ರಾಹಕ ಒಂದು ಆರ್ಥಿಕ ವರ್ಷದಲ್ಲಿ ಬಳಸಿದ ಸರಾಸರಿ ವಿದ್ಯುತ್ ಯೂನಿಟ್‌ಗೆ ಶೇ. 10 ಯೂನಿಟ್ ಸೇರಿಸಿ, ಗರಿಷ್ಠ 200 ಯೂನಿಟ್ ವರೆಗೆ ವಿದ್ಯುತ್ ಬಳಕೆಗೆ ಅವಕಾಶವಿದೆ. ಕೆಲವು ಗ್ರಾಹಕರು ಬೇಸಿಗೆ ಕಾಲದ ಹಿನ್ನೆಲೆ, ನಿಗದಿಪಡಿಸಿದ ಯೂನಿಟ್‌ಗಿಂತ ಹೆಚ್ಚು ವಿದ್ಯತ್ ಬಿಲ್ ಬಂದಿದ್ದು, ಪಾವತಿಗೆ ಸ್ವಲ್ಪ ವಿಳಂಬವಾದ ಹಿನ್ನೆಲೆ, ಕರೆಂಟ್ ಸಂಪರ್ಕವನ್ನು ಫ್ಯೂಸ್ ತೆಗೆಯುವ ಮೂಲಕ ಕಡಿತಗೊಳಿಸುತ್ತಿದ್ದಾರೆ. ಈ ಬಗ್ಗೆ ಫಲಾನುಭವಿಗಳಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕೆ ಎಸ್ ಅರ್ ಟಿ ಸಿ ಅಧಿಕಾರಿ ನಿರ್ಮಲ ಮಾತನಾಡಿ, ಮಂಗಳೂರು ವಿಭಾಗಕ್ಕೆ ನೂರು ಹೊಸ ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿದ್ದು , ಉಡುಪಿಗೆ 40 ಬಸ್‌ಗಳು ಆಗಮಿಸಲಿದೆ. ಅಗತ್ಯವಿರುವ ಕಡೆ ಇವುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು. ಜಿಲ್ಲೆಯ ಕೆಲವು ಗ್ರಾಮಾಂತರ ಭಾಗಗಳಿಗೆ ನಗರ ಸಾರಿಗೆ ಬಸ್‌ಗಳು ನಿರಂತರ ಸಂಚಾರ ನಡೆಸುತ್ತಿಲ್ಲ. ರವಿವಾರ ಹಾಗೂ ಸಾರ್ವತ್ರಿಕಾ ರಜಾದಿನಗಳಲ್ಲಿ ಬಸ್‌ಗಳು ಟ್ರಪ್ ಡ್ರಾಪ್ ಮಾಡುತ್ತಿವೆ. ಕೊರೋನಾ ನಂತರದಲ್ಲಿ ಟ್ರಿಪ್ ಡ್ರಾಪ್ ಮಾಡಲಾದ ಬಸ್‌ಗಳು ಮತ್ತೆ ಕಾರ್ಯಾಚರಣೆ ನಡೆಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸೂಕ್ತ ವರದಿ ನೀಡುವಂತೆ ಸಿ.ಇ.ಓ ಪ್ರತೀಕ್ ಬಾಯಲ್ ತಿಳಿಸಿದರು.

ಯುವನಿಧಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 3661 ಅಭ್ಯರ್ಥಿಗಳು ನೋಂದಾಣಿಯಾಗಿದ್ದು, 2741 ಫಲಾನುಭವಿಗಳ ಖಾತೆಗೆ ಡಿ.ಬಿ.ಟಿ ಮೂಲಕ ಹಣ ಪಾವತಿಸಲಾಗಿದೆ. ಹೆಚ್ಚು ಹೆಚ್ಚು ನೋಂದಣಾ ಶಿಬಿರಗಳನ್ನು ಏರ್ಪಡಿಸುವ ಮೂಲಕ ಅರಿವು ಮೂಡಿಸಿ, ಫಲಾನುಭವಿಗಳನ್ನು ಯೋಜನೆಯ ಒಳಗೆ ಬರುವಂತೆ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪ್ರಶಾಂತ ಜತ್ತನ್ನ, ಸತೀಶ್, ಸಂತೋಷ್ ಕುಲಾಲ್ ಹಾಗೂ ಗೀತಾ ವಾಗ್ಲೆ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರು, ತಾಲೂಕುಗಳ ಅಧ್ಯಕ್ಷರು, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net