ಸಾಕ್ಷ್ಯಚಿತ್ರ ತಯಾರಿಸಲು ಸಿದ್ಧತೆ ಮಾಡಿಕೊಳ್ಳಿ: ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಸೂಚನೆ

Guarantee Scheme Implementation Authority Committee Meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಅನುಕೂಲ ಪಡೆದ ಫಲಾನುಭವಿಗಳನ್ನು ಗುರುತಿಸಿ ಯಶೋಗಾಥೆ ಅಥವಾ ಸಾಕ್ಷ್ಯಚಿತ್ರ ತಯಾರಿಸಲು ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಕ್ಷೃಚಿತ್ರ ನಿರ್ಮಿಸುವ ಸಂಬಂಧ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ತಿಳಿಸಿದ್ದಾರೆ. ಅದರಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಗೃಹಲಕ್ಷ್ಮೀ ಅನೇಕ ಬಡ ಕುಟುಂಬಗಳಿಗೆ ಭರವಸೆ ನೀಡಿರುವ ಯೋಜನೆ. ಆದರೆ ಜಿಲ್ಲೆಯಲ್ಲಿನ ಕೆಲವು ಕುಟುಂಬಗಳು ಗೃಹಲಕ್ಷ್ಮೀ ಹಣ ತಲುಪಿಲ್ಲ ಎಂದು ನಮ್ಮ ಬಳಿ ದೂರು ನೀಡುತ್ತಿದ್ದು, ಇಲಾಖೆಯವರು ದೂರು ಬಾರದಂತೆ ಹಣವನ್ನು ಫಲಾನುಭವಿಗಳಿಗೆ ತಲುಪಿಸಿ. ಅನ್ನಭಾಗ್ಯ ಸೌಲಭ್ಯ ಪ್ರತಿಯೊಬ್ಬರಿಗೂ ತಲುಪಬೇಕೆಂಬುದು ನಮ್ಮ ಉದ್ದೇಶವಾಗಿದ್ದು, ಪಡಿತರ ಚೀಟಿ ಹೊಂದಿದ್ದು ಅಕ್ಕಿ ಪಡೆಯದವರ ವರದಿ ತಯಾರಿಸಿ. ಅವರ ಅಭಿಪ್ರಾಯ ತಿಳಿಯಿರಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

2025ರ ಫೆಬ್ರವರಿ ಮಾಹೆಯಿಂದ ಪಡಿತರ ಚೀಟಿದಾರರಿಗೆ ನೇರ ನಗದು ಬದಲು ಅಕ್ಕಿಯನ್ನು ನೀಡಲಾಗುತ್ತಿದೆ. 2025ರ ಜನವರಿ ಮಾಹೆಯ ನೇರ ನಗದು ಬಾಕಿಯಿದ್ದು, ಫಲಾನುಭವಿಗಳಿಗೆ ಜನವರಿ ಮಾಹೆಯ ಅನ್ನಭಾಗ್ಯ ಯೋಜನೆಯ ಹಣ ತಲುಪಿಸುವಲ್ಲಿ ನಿಗಾ ವಹಿಸಿ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 2023ರ ಜೂನ್ ಮಾಹೆಯಿಂದ 2025ರ ಆಗಸ್ಟ್ ಮಾಹೆಯವರೆಗೆ 15.99 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಕೆಲವೆಡೆ ಬಸ್‌ನ ಕೊರತೆಯಿರುವುದು ಕಂಡುಬಂದಿದ್ದು, ನೂತನ ಬಸ್ ವ್ಯವಸ್ಥೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 2025ರ ಏಪ್ರಿಲ್ ಮಾಹೆಯಿಂದ ಆಗಸ್ಟ್‌ವರೆಗೆ 10.1 ಕೋಟಿ ಯೂನಿಟ್ ಗಳನ್ನು ಗ್ರಾಹಕರು ವಿದ್ಯುತ್ ಬಳಕೆ ಮಾಡಿದ್ದು, 98.96 ಕೋಟಿ ರೂ ಗಳಷ್ಟು ವೆಚ್ಚವಾಗಿರುತ್ತದೆ ಎಂದು ತಿಳಿಸಿದರು.

ಯುವನಿಧಿ ಯೋಜನೆಯಡಿಯಲ್ಲಿ ಪ್ರಾರಂಭವಾಗಿರುವ ಯುವನಿಧಿ ಪ್ಲಸ್ ಯೋಜನೆಯ ಬಗ್ಗೆ ಕಾಲೇಜುಗಳಲ್ಲಿ ಅರಿವು ಮೂಡಿಸಿ ಮತ್ತು ಯುವನಿಧಿ ಪ್ಲಸ್ ಯೋಜನೆಯ ಫಲಕ, ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರಪಡಿಸಿ. ಯುವನಿಧಿ ಪ್ರಾರಂಭದಿಂದ 2025ರ ಜೂನ್ ಅಂತ್ಯದವರೆಗೆ ಯುವನಿಧಿ ಯೋಜನೆಯಡಿ 13.68 ಕೋಟಿ ರೂಗಳನ್ನು ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಮುಖ್ಯಯೋಜನಾಧಿಕಾರಿ ಧನುಷ್, ಪ್ರಾಧಿಕಾರದ ಉಪಾಧ್ಯಕ್ಷರಾದ ಪ್ರಶಾಂತ್‌ಬಾಬು, ರಾಜೇಂದ್ರಪ್ರಸಾದ್, ಸದಸ್ಯರಾದ ಅಜಯ್‌ಕುಮಾರ್, ಕುಮಾರ, ರುದ್ರಪ್ಪ, ಮಹಮ್ಮದ್ ಅನ್ಸರ್, ರಮೇಶ್, ಮಾದೇಶ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ನವೀನ್‌ಕುಮಾರ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net