

ಮಂಡ್ಯ: ಜಿಲ್ಲೆಯಲ್ಲಿ ಯಾರು ಕೂಡ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಬಾರದು. ಅರ್ಹ ಪ್ರತಿಯೊಬ್ಬರೂ ಕೂಡ ಗ್ಯಾರಂಟಿ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಇನ್ನೂ ಕೆಲವರು ವಂಚಿತರಾಗಿದ್ದಾರೆ. ಕಾರಣ ನೀವುಗಳು ನೀಡಿರುವ ದಾಖಲೆಗಳು ತಪ್ಪಾಗಿರಬಹುದು. ಅಥವಾ ಯೋಜನೆಗಳ ಮಹತ್ವದ ಬಗ್ಗೆ ತಿಳಿಯದೇ ಇರಬಹುದು. ಅಂತಹವರು ಈ ಕೂಡಲೇ ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಸಿ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ತಾಲೂಕುವಾರು ನೋಂದಣಿ ವಿವರದಂತೆ 2024ರ ಅಕ್ಟೋಬರ್ ಅಂತ್ಯದವರೆಗೆ ಕೆ.ಆರ್. ಪೇಟೆ ತಾಲೂಕಿನಲ್ಲಿ 70,041 ಗುರಿ ಹೊಂದಿದ್ದು, 67,675 ಗುರಿ ಸಾಧಿಸಲಾಗಿದೆ. ಮದ್ದೂರು 82,380 ಗುರಿಯಲ್ಲಿ 78,593, ಮಳವಳ್ಳಿಯಲ್ಲಿ 77,590 ಗುರಿಗೆ 73,619, ಮಂಡ್ಯದಲ್ಲಿ 1,01,578 ಗುರಿಯಲ್ಲಿ 99,561 ಸಾಧನೆ, ನಾಗಮಂಗಲದಲ್ಲಿ 49,204 ಗುರಿಯಲ್ಲಿ 47,007, ಪಾಂಡವಪುರದಲ್ಲಿ 48,052 ಗುರಿಯಲ್ಲಿ 46,915, ಶ್ರೀರಂಗಪಟ್ಟಣ 48,716 ಗುರಿಯಲ್ಲಿ 46,861 ಸಾಧಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 4,77,561 ಗುರಿ ಹೊಂದಿದ್ದು, ಅದರಲ್ಲಿ 4,60,231 ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ 2023 ಆಗಸ್ಟ್‌ನಿಂದ 2024 ಸೆಪ್ಟೆಂಬರ್‌ರವರೆಗೆ ಜಿಲ್ಲೆಯಲ್ಲಿ ಒಟ್ಟು 4,51,473 ಅರ್ಹ ಫಲಾನುಭವಿಗಳಿದ್ದು, 4,48,404 ಫಲಾನುಭವಿಗಳಿಗೆ ಹಣ ಪಾವತಿಸಲಾಗಿದೆ. ಒಟ್ಟು 1218.74 ಕೋಟಿ ರೂ ಧನಸಹಾಯ ಬಿಡುಗಡೆ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಐಟಿ/ಜಿಎಸ್‌ಟಿ ತೆರಿಗೆದಾರರಲ್ಲವೆಂದು ದೃಢೀಕರಣ ನೀಡಿರುವ ಫಲಾನುಭವಿಗಳು ಜಿಲ್ಲೆಯಲ್ಲಿ 902 ಇದ್ದು, ಇವರು ಈ ಕೂಡಲೇ ತಮ್ಮ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಶೀಲನೆ ಮಾಡಿಸಿ ಯೋಜನೆಗೆ ನೋಂದಣಿ ಆಗಬಹುದು ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ 2023 ಜುಲೈನಿಂದ 2024 ಆಗಸ್ಟ್‌ವರೆಗೆ ಒಟ್ಟು 60,13,538 ಫಲಾನುಭವಿಗಳಿದ್ದು, ಒಟ್ಟು 3,30,04,78,751 ರೂ.ಗಳಲ್ಲಿ ಅನುದಾನ ಬಿಡುಗಡೆಯಾಗಿದೆ. 2024 ಜುಲೈ ಮಾಹೆಗೆ ಸಂಬಂಧಿಸಿದಂತೆ 3,63,403 ಪಡಿತರ ಚೀಟಿಗಳಿಗೆ ಒಟ್ಟು 19.87 ಕೋಟಿ ರೂ ಮೊತ್ತವು ಪಡಿತರ ಚೀಟಿಯಲ್ಲಿನ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಈಗಾಗಲೇ ಡಿಬಿಟಿ ಮುಖಾಂತರ ಜಮಾ ಆಗಿರುತ್ತದೆ. ಉಳಿದ 79,901 ಪಡಿತರ ಚೀಟಿಗಳಿಗೆ 4.37 ಕೋಟಿ ರೂ ಅನುದಾನದ ಕೊರತೆ ಕಾರಣ ಹಣ ಜಮೆ ಬಾಕಿ ಇರುತ್ತದೆ. ಆಗಸ್ಟ್ ಮಾಹೆಗೆ ಸಂಬಂಧಿಸಿದಂತೆ 23.04 ಕೋಟಿ ರೂ ಮೊತ್ತವು ಪಡಿತರ ಚೀಟಿಯಲ್ಲಿನ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಈಗಾಗಲೇ ಡಿಬಿಟಿ ಮುಖಾಂತರ ಜಮಾ ಆಗಿರುತ್ತದೆ. ಉಳಿದ 19,976 ಪಡಿತರ ಚೀಟಿಗೆ ಒಟ್ಟು 1.16 ಕೋಟಿ ರೂ ಅನುದಾನದ ಕೊರತೆ ಕಾರಣ ಹಣ ಜಮೆ ಬಾಕಿ ಇರುತ್ತದೆ ಎಂಬ ಮಾಹಿತಿ ನೀಡಿದರು.
ಶಕ್ತಿ ಯೋಜನೆಯಲ್ಲಿ 2023 ಜೂನ್‌ನಿಂದ 2024 ನವೆಂಬರ್‌ವರೆಗೆ ಜಿಲ್ಲೆಯಲ್ಲಿ ಒಟ್ಟು 455 ವಾಹನ ಬಳಕೆ ಮಾಡಿಕೊಳ್ಳಲಾಗಿದೆ. ಶಕ್ತಿ ಯೋಜನೆ ಪೂರ್ವದಲ್ಲಿ 2,04,724 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, ಯೋಜನೆ ನಂತರ 2,85,602 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಶಕ್ತಿ ಯೋಜನೆಯಡಿ ಪ್ರತಿದಿನ 1,88,844 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, ಈ ಯೋಜನೆಗಾಗಿ ಈವರೆಗೆ 25857.79 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ 2023 ಆಗಸ್ಟ್‌ನಿಂದ 2024 ನವೆಂಬರ್‌ವರೆಗೆ ಜಿಲ್ಲೆಯಲ್ಲಿ ಒಟ್ಟು 4,84,071 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಅಂತೆಯೇ ಜಿಲ್ಲೆಯಲ್ಲಿ ಒಟ್ಟು 4,268 ಫಲಾನುಭವಿಗಳು ಯುವನಿಧಿಗೆ ನೋಂದಣಿಯಾಗಿದ್ದಾರೆ ಎಂದು ವಿವರಿಸಿದರು.
ಪ್ರಾಧಿಕಾರದ ಉಪಾಧ್ಯಕ್ಷರಾದ ಶಿವಣ್ಣ, ಕೆ.ಸಿ.ಪ್ರಶಾಂತ್‌ಬಾಬು, ಜಿಪಂ ಮುಖ್ಯ ಯೋಜನಾಧಿಕಾರಿ ಎಸ್.ಧನುಷ್ ಇತರರಿದ್ದರು.