

ಬೀಳಗಿ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನುಷ್ಠಾನಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳು ಜಗತ್ತಿನಲ್ಲಿಯೇ ಮಾದರಿ ಕಾರ್ಯಕ್ರಮವಾಗಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಸ್ಥಳೀಯ ತಹಸೀಲ್ದಾರ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕಾ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳುವ ಮೂಲಕ ಹೊಸದಾಗಿ 522 ಜನರಿಗೆ ಪಿಂಚಣಿ ಮಂಜೂರಾತಿ ಪತ್ರ ನೀಡಲಾಗಿದೆ. ಈಗಾಲೇ ತಾಲೂಕಿನಲ್ಲಿ ಒಟ್ಟು 18471 ಜನರು ವಿವಿಧ ಪಿಂಚಣಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಪಿಂಚಣಿ ಸೌಲಭ್ಯದಿಂದ ಯಾರು ವಂಚಿತರಾಗಬಾರದು ಏನ್ನುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಸ್ವಾಲಂಭಿ ಜೀವನ ನಡೆಸಲು ಹೆಚ್ಚು ಅನುಕೂಲವಾಗಿದೆ. ಮಹಿಳೆಯರು ಅವಶ್ಯವಿದ್ದಾಗ ಮಾತ್ರ ಶಕ್ತಿಯ ಯೋಜನೆ ಬಳಸಿಕೊಳ್ಳಬೇಕು. ಅನವಶ್ಯಕವಾಗಿ ಬಸ್ಸಿನಲ್ಲಿ ಸುತ್ತುವುದು ಮಾಡಬೇಡಿ ಎಂದರು.
ವಿರೋಧ ಪಕ್ಷದವರು ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನರ ಕಲ್ಯಾಣಕ್ಕಾಗಿ ಸರ್ಕಾರದ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ ಎಂದರು.
ತಹಸೀಲ್ದಾರ್ ವಿನೋದ ಹತ್ತಳ್ಳಿ ಪ್ರಸ್ತಾವಿಕವಾಗಿ ಮಾತನಾಡಿ, ಅಂಗವಿಕಲ, ಬುದ್ದಿಮಾಂಧ್ಯ, ಇಂದಿರಾ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ ವೇತನ ಹಾಗೂ ಮೈತ್ರಿ, ಮನಸ್ವಿನಿ, ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಲ್ಲಿ ಒಟ್ಟು 18,417 ಲಾನುಭವಿಗಳಿಗೆ ಸರ್ಕಾರವು ನೆರವು ನೀಡುತ್ತಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಸಾಗರ ತೆಕ್ಕೆನ್ನವರ, ಅಣವೀರಯ್ಯ ಪ್ಯಾಟಿಮಠ ಮಾತನಡಿದರು. ಪಪಂ ಅಧ್ಯಕ್ಷ ಮುತ್ತು ಬೋರ್ಜಿ ಹಾಗೂ ಶಿರಸ್ತೇದಾರ ಸೌದಾಗರ, ಅನಗವಾಡಿ ವಲಯ ಉಪ ತಹಸೀಲ್ದಾರ್ ರಮೇಶ ಪಾತರದ, ಕಂದಾಯ ನಿರಕ್ಷಕರಾದ ಮಂಜುನಾಥ ಧರೆಗೊಂಡ, ವಿಠ್ಠಲ ಕೂಗಟಿ ಇದ್ದರು.