ಗ್ಯಾರಂಟಿ ಯೋಜನೆ ಟೀಕೆ: ಹಸಿದವರು ಯಾರೂ ಹೀಗೆ ಮಾತನಾಡಲ್ಲ

mysore
Published on

ಮೈಸೂರು: ‘ಗ್ಯಾರಂಟಿ ಯೋಜನೆಯಲ್ಲ, ಅದು ಬಿಟ್ಟಿಭಾಗ್ಯ. ಅದರಿಂದ ಜನರು ಸೋಮಾರಿಗಳಾಗಿದ್ದಾರೆ’ ಎಂದು ಟೀಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಫಲಾನುಭವಿಗಳು, ‘ಇದೆಲ್ಲ ಹೊಟ್ಟೆ ತುಂಬಿದವರ ಮಾತು, ಹಸಿದವರು ಯಾರೂ ಹೀಗೆ ಮಾತನಾಡಲ್ಲ’ ಎಂದು ತಿರುಗೇಟುಕೊಟ್ಟರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಯಿತು. ಟೀಕಿಸುವವರು ಹೊಟ್ಟೆ ತುಂಬಿದವರು. ಹೊಟ್ಟೆ ತುಂಬಿದವರಿಗೆ ಹಸಿವಿನ ಅರಿವು ಆಗುವುದಿಲ್ಲ ಎಂಬುದು ಗ್ಯಾರಂಟಿ ಯೋಜನೆಗಳ ಫಲಾನುಭವಿ ಕ್ಯಾತಮಾರನಹಳ್ಳಿಯ ನಂದಿನಿ ಖಡಕ್ ಮಾತಿಗೆ ಇತರ ಫಲಾನುಭವಿಗಳೂ ಧ್ವನಿಗೂಡಿಸಿದರು.


ಈ ಯೋಜನೆಗಳು ಮುಂಚೆಯೇ ಇದ್ದಿದ್ದರೆ ನಾವು ಬಾಲ್ಯದಲ್ಲಿ ಹಸಿವಿನಿಂದ ನರಳುವುದು ತಪ್ಪುತ್ತಿತ್ತು. ಗೃಹಲಕ್ಷ್ಮಿ ಯೋಜನೆಯ ಹಣ ನನ್ನ ತಾಯಿಗೆ ಅಂದೇ ಸಿಕ್ಕಿದ್ದಿದ್ದರೆ ನಾವು 4 ಜನ ಹೆಣ್ಣು ಮಕ್ಕಳು ವಿದ್ಯಾವಂತೆಯರಾಗುತ್ತಿದ್ದೆವು. ಆದರೆ, ಇದರ ಭಾಗ್ಯ ನನ್ನ ತಾಯಿಗೆ ಸಿಕ್ಕಿರಲಿಲ್ಲ ಎಂದೂ ಹೇಳಿದರು.


ಗೃಹಲಕ್ಷ್ಮಿ ಹಣದಿಂದ ಸ್ವಂತ ಉದ್ಯೋಗ:


‘ನನಗೆ ಬಂದಂತಹ 5 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಸಿ, ಅದರಲ್ಲಿ ಬಟ್ಟೆ ಬ್ಯಾಗ್ ತಯಾರಿಸುವ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಜೀವನ ಕಟ್ಟಿಕೊಂಡಿದ್ದೇನೆ. ದಿನಕ್ಕೆ ಸುಮಾರು 350 ರೂ. ಲಾಭ ಗಳಿಸುತ್ತಿರುವೆ ಎಂದು ಕುಕ್ಕರಹಳ್ಳಿ ಗ್ರಾಮದ ಗ್ಯಾರಂಟಿ ಯೋಜನೆಗಳ ಫಲಾನುಭವಿ ಲಕ್ಷ್ಮೀ ಹೇಳಿದರು.


ಗೃಹಲಕ್ಷ್ಮಿ ಹಣದಿಂದ ಟೈಲರಿಂಗ್ ಶುರು:

ಗೃಹಲಕ್ಷ್ಮಿ ಹಣವನ್ನು ಉಳಿತಾಯ ಮಾಡಿ ಹೊಲಿಗೆ ಯಂತ್ರವನ್ನು ಖರೀದಿಸಿ, ಟೈಲರಿಂಗ್ ಶುರು ಮಾಡಿರುವೆ. ಅಲ್ಲದೆ ನನ್ನ ತಂದೆ ಮರಣ ಹೊಂದಿದಾಗ ನನ್ನ ಅಮ್ಮನ ಯೋಗಕ್ಷೇಮ ವಿಚಾರಿಸಲು ಶಕ್ತಿ ಯೋಜನೆಯ ಮೂಲಕ 4 ತಿಂಗಳು ಸುಮಾರು 30-40 ಕಿ.ಮೀ. ಉಚಿತ ಬಸ್ ಪ್ರಯಾಣ ಮಾಡಿದ್ದೇನೆ.

ಇದರಿಂದ 25 ಸಾವಿರ ರೂ. ಉಳಿಸಿದ್ದೇನೆ ಎಂದು ವರುಣದ ನಜ್ಮಾ ಕೌಸರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net