ಮೈಸೂರಿನಲ್ಲಿ ‘ಗ್ಯಾರಂಟಿ’ ನಡಿಗೆ ಹಾಡಿ ಕಡೆಗೆ ಅಭಿಯಾನ : ಡಾ.ಪುಷ್ಪಾ ಅಮರ್‌ನಾಥ್ ಘೋಷಣೆ

Guarantee Scheme Committee Meeting
Published on

ಮೈಸೂರು: ಜಿಲ್ಲೆಯಲ್ಲಿ 1010 ಆದಿವಾಸಿಗಳು ಇನ್ನೂ ಸಹ ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಮುಂದೆ ಬಂದಿಲ್ಲ. ಹಾಗಾಗಿ ಅವರಿಗೆ ಸೌಲಭ್ಯ ತಲುಪಿಸಲು ‘ಗ್ಯಾರಂಟಿ ನಡಿಗೆ ಹಾಡಿ ಕಡೆಗೆ’ ಅಭಿಯಾನ ಆಯೋಜಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿಯ ದೇವರಾಜ ಅರಸು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ಕೆಲವು ಆದಿವಾಸಿಗಳು ಮುಂದೆ ಬಂದಿಲ್ಲ. ಅಂತಹವರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಸೇವೆ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ‘ಗ್ಯಾರಂಟಿ ನಡಿಗೆ ಹಾಡಿ ಕಡೆಗೆ’ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಕೋರಿಕೊಂಡರು.

ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಕಳೆದ ಸಭೆಯಲ್ಲಿ ಅಧಿಕಾರಿಗಳು ನೀಡಿದ ವರದಿಯ ಪ್ರಕಾರ 1026 ಆದಿವಾಸಿಗಳು ನೋಂದಾವಣೆ ಆಗಿರಲಿಲ್ಲ. ಈ ಪೈಕಿ ಕೇವಲ 16 ಜನರನ್ನು ಮಾತ್ರ ನೋಂದಣಿ ಮಾಡಲಾಗಿದ್ದು, ಇನ್ನೂ ಸಹ 1010 ಆದಿವಾಸಿಗಳ ನೋಂದಣಿ ಬಾಕಿ ಇದೆ. ಆದಿವಾಸಿಗಳಿಗೆ ಸೌಲಭ್ಯ ತಲುಪಿಸುವ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷೃ ತೋರುವುದು ಸರಿಯಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಜತೆಗೆ ಐಟಿಡಿಪಿ ಅಧಿಕಾರಿಗಳು ಸಹ ಜವಾಬ್ದಾರಿ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಆದಿವಾಸಿಗಳಿಗೆ ಸೌಲಭ್ಯ ತಲುಪಿಸುವ ವಿಚಾರದಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಐಟಿಡಿಪಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.

ಸಮಿತಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಗ್ಯಾರಂಟಿ ಯೋಜನೆಗೆ ಪಡಿತರ, ಆಧಾರ್, ಬ್ಯಾಂಕ್ ಖಾತೆಯ ಅವಶ್ಯಕತೆ ಇದೆ. ಆದರೆ, ಸಾಕಷ್ಟು ಆದಿವಾಸಿಗಳ ಬಳಿ ಪಡಿತರ, ಆಧಾರ್, ಬ್ಯಾಂಕ್ ಖಾತೆ ಇಲ್ಲ. ಆದಿವಾಸಿಗಳಿಗೆ ಸರ್ಕಾರದ ಸೌಲಭ್ಯ ಪಡೆಯುವ ಮಾಹಿತಿ ಇರುವುದಿಲ್ಲ. ಹಾಗಾಗಿ ಅಧಿಕಾರಿಗಳು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು.

ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳಿಗೆ ಸಕಾಲದಲ್ಲಿ ದೊರೆಯುವಂತೆ ಮಾಡಬೇಕು. ಯೋಜನೆಯ ಹಣ ಸಕಾಲದಲ್ಲಿ ಬಾರದ ಹಿನ್ನೆಲೆಯಲ್ಲಿ ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಹಾಗಾಗಿ ವಿಳಂಬ ತೋರದೆ ಯೋಜನೆಯ ಹಣ ಫಲಾನುಭವಿಗಳಿಗೆ ದೊರೆಯುವಂತೆ ಮಾಡಬೇಕು. ಗೃಹಲಕ್ಷ್ಮೀ ಯೋಜನೆಯ ಹಣ ಪಡೆದುಕೊಂಡ ಮಹಿಳೆಯರ ಯಶೋಗಾಥೆಯನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ನಿರ್ದೇಶನ ನೀಡಿದರು.

ಸಮಿತಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕೆಲವು ಬಡ ಜನರು ಮನೆ ನಿರ್ಮಾಣಕ್ಕೆ ಸಾಲ ಪಡೆಯುವ ಉದ್ದೇಶದಿಂದ ಐಟಿ ರಿಟರ್ನ್ ಮಾಡಿಸಿರುತ್ತಾರೆ. ಅವರು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇದು ಕೇಂದ್ರ ಸರ್ಕಾರದ ಹಂತದಲ್ಲಿ ಸರಿ ಪಡಿಸಬೇಕಾಗಿದೆ. ಈ ರೀತಿ ಸಮಸ್ಯೆ ಎದುರಿಸುತ್ತಿರುವವರಿಗೆ ಅಧಿಕಾರಿಗಳು ಯಾವ ಕಾರಣಕ್ಕೆ ಅರ್ಜಿ ತಿರಸ್ಕೃತಗೊಂಡಿದೆ ಎಂಬ ಕುರಿತು ಹಿಂಬರಹ ನೀಡಬೇಕು ಎಂದು ನಿರ್ದೇಶನ ನೀಡಿದರು.

ಯುವ ನಿಧಿ ಉದ್ಯೋಗ ಮೇಳ:  ಮೈಸೂರಿನಲ್ಲಿ ಸೆ.6 ರಂದು ಬೃಹತ್ ಯುವ ನಿಧಿ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್ ಹೇಳಿದರು.

ಕಲ್ಬುರ್ಗಿಯಲ್ಲಿ ಆಯೋಜಿಸಿರುವ ಮೇಳದಲ್ಲಿ 30 ಸಾವಿರ ಯುವಜನರ ನೋಂದಣಿ ಆಗಿದೆ. ಮೈಸೂರಿನಲ್ಲಿ ನಡೆಯುತ್ತಿರುವುದು ವಿಭಾಗೀಯ ಮಟ್ಟದ ಮೇಳವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಯುವಜನರನ್ನು ಸೇರಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಫಲಾನುಭವಿಗಳ ಕೈ ಸೇರಿದ 28 ಸಾವಿರ ಕೋಟಿ ರೂ.: ಗ್ಯಾರಂಟಿ ಯೋಜನೆ ಜಾರಿಯಾದ ನಂತರ ಇದುವರೆಗೆ ಜಿಲ್ಲೆಯ ಫಲಾನುಭವಿಗಳಿಗೆ ಯೋಜನೆಯ ಮೂಲಕ 28,278 ಕೋಟಿ ರೂ. ಹಂಚಿಕೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹೇಳಿದರು. ಕೆಲವು ತಾಂತ್ರಿಕ ದೋಷದಿಂದ ಕೆಲವರಿಗೆ ಹಣ ಸಕಾಲದಲ್ಲಿ ಪಾವತಿಯಾಗದೆ ಇರಬಹುದು. ಆದರೆ, ತಾಂತ್ರಿಕ ದೋಷ ಪರಿಹಾರವಾದ ನಂತರ ಎಲ್ಲರಿಗೂ ಹಂಚಿಕೆಯಾಗಲಿದೆ ಎಂದು ಹೇಳಿದರು.

ಸಭೆಯಲ್ಲಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಹುಣಸೂರು ಬಸವಣ್ಣ, ಸದಸ್ಯರಾದ ಯೋಗೀಶ್, ಉದಯಶಂಕರ್, ಮಹದೇವು, ಉತ್ತನಹಳ್ಳಿ ಶಿವಣ್ಣ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net