ಗ್ಯಾರಂಟಿ ಯೋಜನೆ ಸಮರ್ಪಕ ಜಾರಿಗೆ ಆಗ್ರಹಿಸಿ ಧರಣಿ

Siraguppa BJP Protest on Guarantee Scheme
ಸಿರಗುಪ್ಪದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತಾಲೂಕು ಘಟಕ ಸೋಮವಾರ ಧರಣಿ ನಡೆಸಿತು.
Published on

ಸಿರಗುಪ್ಪ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗೆ ಆಗ್ರಹಿಸಿ ಬಿಜೆಪಿ ತಾಲೂಕು ಘಟಕ ನಗರದ ಸರ್ಕಾರಿ ನೌಕರರ ಭವನದ ಮುಂದೆ ಸೋಮವಾರ ಧರಣಿ ನಡೆಸಿತು.

ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಮಹಿಳೆಯರಿಗೆ ಉಚಿತ ಬಸ್, ಉಚಿತ ವಿದ್ಯುತ್, ನಿರುದ್ಯೋಗಿ ಭತ್ಯೆ, ಮನೆ ಯಜಮಾನಿಗೆ ಎರಡು ಸಾವಿರ ರೂ., 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ, ಸರ್ಕಾರ ರಚಿಸಿ ತಿಂಗಳಾದರೂ ಒಂದು ಉಚಿತ ಭಾಗ್ಯವೂ ಸರಿಯಾಗಿ ಜಾರಿಯಾಗುತ್ತಿಲ್ಲ.

ಕೇವಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಬಿಟ್ಟರೆ ಬೇರೆ ಯಾವುದೇ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ದಿನಗಳನ್ನು ಮುಂದೂಡುತ್ತ ಇಲ್ಲಸಲ್ಲದ ಸಬೂಬುಗಳನ್ನು ಹೇಳುತ್ತಿದೆ ಎಂದು ಆರೋಪಿಸಿದರು.

ಒಂದು ಕಡೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಾ ಕರೆಂಟ್ ಬಿಲ್ ಹೆಚ್ಚುಮಾಡಿದೆ. 500 ರೂ. ಬರುತ್ತಿದ್ದ ಬಿಲ್ ಕಾಂಗ್ರೆಸ್ ಸರ್ಕಾರ ಬಂದ ಮೇಲೆ 1500 ರೂ. ಬರುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ, ಸದ್ದಿಲ್ಲದೆ ಬಸ್ ಪ್ರಯಾಣ ದರ ಹೆಚ್ಚು ಮಾಡುತ್ತಿದೆ. ಅಲ್ಲದೆ ನಿರುದ್ಯೋಗಿಗಳು ಯಾರು ಎನ್ನುವುದೇ ಸರ್ಕಾರಕ್ಕೆ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಗಳನ್ನು ಅತಿ ಶೀಘ್ರದಲ್ಲಿ ಈಡೇರಿಸದೇ ಹೋದರೆ ಜನರ ಪರವಾಗಿ ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ಮೂಲಕ ರಾಜ್ಯಪಾಲಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಕಾರ್ಯಕರ್ತರಾದ ಕೆ.ಮಲ್ಲಿಕಾರ್ಜುನ, ಡಿ.ಸೋಮಪ್ಪ, ಎಂ.ವೀರೇಶ, ಎಂ.ಎಸ್.ಕೊಮಾರೆಪ್ಪ, ಕೆ.ಮಾರುತಿ, ದೊಡ್ಡಬಸವನಗೌಡ, ಎಂ.ಬೆಟ್ಟಪ್ಪ, ಎಸ್.ಮುರಳಿ, ಎಸ್.ಮಲ್ಲಿಕಾರ್ಜುನ, ಖಾಜಾಆಸಾಬ್, ಡಿ.ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net