ಗ್ಯಾರಂಟಿ ಅನುಷ್ಠಾನಗೊಳ್ಳದಿದ್ದರೆ ರಾಜಕೀಯ ನಿವೃತ್ತಿ

Konaraddi New
Published on

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರ ಭರವಸೆ ನೀಡಿರುವ ಗ್ಯಾರಂಟಿಗಳನ್ನು ಕೊಡದೇ ಇದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನಡೆಸಿದ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ಕೊಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದರು.

ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ಶೇ. 100ರಷ್ಟು ಜನರಿಗೆ ತಲುಪುತ್ತವೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ, ಸರ್ಕಾರ ಈ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತದೆ. ಇದರಲ್ಲಿ ಸಂದೇಹವೇ ಇಲ್ಲ ಎಂದರು.

ಈ ಹಿಂದಿನ ಬಿಜೆಪಿ ಸರ್ಕಾರ ಐದು ವರ್ಷ ಒಂದೂ ಜನಪರ ಯೋಜನೆ ಜಾರಿಗೆ ತರಲಿಲ್ಲ. ಕಾಂಗ್ರೆಸ್ ಸರ್ಕಾರ ಈಗಷ್ಟೇ ಅಧಿಕಾರಕ್ಕೆ ಬಂದಿದೆ. ಯಾಕಿಷ್ಟು ಅವಸರ ? ಎಂದು ಪ್ರಶ್ನಿಸಿದರು.

ನನಗೂ ಸಚಿವನಾಗುವ ಆಶಯ ಇದೆ. ಅದರಲ್ಲೂ ಕೃಷಿ ಖಾತೆ ನನಗೆ ಇಷ್ಟವಾದದ್ದು. ಒಂದು ಬಾರಿಯಾದರೂ ಕೃಷಿ ಸಚಿವನಾಗುವ ಆಶಯ ಇದೆ. ಮೇ 27ರಂದು ನೂತನ ಸಚಿವರ ಪಟ್ಟಿ ಬಿಡುಗಡೆಯಾಗಲಿದೆ. ಧಾರವಾಡ ಜಿಲ್ಲೆಯಲ್ಲಿ ಸಂತೋಷ ಲಾಡ್, ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ ಅವರಂತಹ ಹಿರಿಯರು ಇದ್ದಾರೆ. ನನ್ನ ಹೆಸರು ಪಟ್ಟಿಯಲ್ಲಿ ಬರುತ್ತದೋ ಎಂಬುದನ್ನು ಕಾದು ನೋಡೋಣ ಎಂದರು.

ಆರ್​ಎಸ್​ಎಸ್, ಬಜರಂಗ ದಳ ನಿಷೇಧದ ಬಗ್ಗೆ ಪ್ರತಿಕ್ರೀಯೆ ನೀಡಲು ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net