ಯುವ ನಿಧಿ ಯೋಜನೆಗೆ 6,670 ಯುವಕರ ನೋಂದಣಿ; ನಿರುದ್ಯೋಗಿ ಪದವೀಧರರಿಗೆ ನೆರವಿನ `ಗ್ಯಾರಂಟಿ'

5 Dwd 4
Published on

ಮ0ಜುನಾಥ ಎಸ್. ಅಂಗಡಿ ಧಾರವಾಡ

ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳಲ್ಲಿ ಒಂದಾದ `ಯುವ ನಿಧಿ' ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಿರುದ್ಯೋಗಿ ಪದವೀಧರರ ನೆರವಿಗಾಗಿ ಅನುಷ್ಠಾನಗೊಂಡಿರುವ ಯೋಜನೆಗೆ ಜಿಲ್ಲೆಯಲ್ಲಿ 6,670 ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. ಈವರೆಗೆ, 4,423 ಫಲಾನುಭವಿಗಳು ಹಣಕಾಸಿನ ನೆರವು ಪಡೆದಿದ್ದು, 2,205 ಜನ ಅನುಮೋದನೆಗಾಗಿ ಕಾಯುತ್ತಿದ್ದಾರೆ.

2023 ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. 5 ಗ್ಯಾರಂಟಿಗಳಲ್ಲಿ ಯುವ ನಿಧಿ ಕೂಡ ಒಂದಾಗಿದೆ. ಈ ಯೋಜನೆಯಡಿ ಪದವೀಧರರಿಗೆ 3,000 ರೂಪಾಯಿ ಮತ್ತು ಡಿಪ್ಲೋಮಾ ಪಡೆದವರಿಗೆ 1,500 ರೂ. ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2024ರ ಜ. 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯಂದು ರಾಜ್ಯಾದ್ಯಂತ ಚಾಲನೆ ನೀಡಲಾಗಿತ್ತು.

ಜಿಲ್ಲೆಯಲ್ಲಿ ಇದುವರೆಗೆ 2,438 ಮಹಿಳಾ ಫಲಾನುಭವಿಗಳು ಮತ್ತು 1,985 ಪುರುಷರು ಇದರ ಪ್ರಯೋಜನ ಪಡೆದಿದ್ದಾರೆ. ಯುವ ನಿಧಿ ನೋಂದಣಿಗೆ ಕೆಲ ಷರತ್ತುಗಳನ್ನು ವಿಽಸಲಾಗಿದೆ. 2022- 23ನೇ ಸಾಲಿನಲ್ಲಿ ಅಥವಾ ಅದರ ನಂತರದ ವರ್ಷ ತೇರ್ಗಡೆಯಾದವರು ಯೋಜನೆಗೆ ಅರ್ಹರು. ನೋಂದಣಿ ಮಾಡಿಕೊಂಡು ಉದ್ಯೋಗ ಲಭಿಸುವವರೆಗೆ ಅಥವಾ 2 ವರ್ಷಗಳವರೆಗೆ ಯಾವುದು ಮೊದಲೋ ಅಲ್ಲಿಯವರಿಗೆ ಯುವ ನಿಧಿ ನಿರುದ್ಯೋಗ ಭತ್ಯೆ ಜಮೆಯಾಗುತ್ತದೆ. ಪದವಿ ನಂತರ ಉನ್ನತ ಶಿಕ್ಷಣಕ್ಕೆ ದಾಖಲಾದವರು ಅಥವಾ ಅಪ್ರೆಂಟಿಸ್ ವೇತನ ಪಡೆಯುವವರು, ಖಾಸಗಿ ಅಥವಾ ಸರ್ಕಾರಿ ಉದ್ಯೋಗಕ್ಕೆ ಸೇರಿದವರು ಇದು ಅನ್ವಯಿಸುವುದಿಲ್ಲ. ಜತೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ವಿವಿಧ ಯೋಜನೆಗಳಡಿ ಸಾಲ ಪಡೆದು ಸ್ವಂತ ಉದ್ಯೋಗ ಮಾಡುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಫಲಾನುಭವಿಗಳು ನಿರುದ್ಯೋಗ ಮುಂದುವರಿದಿರುವ ಬಗ್ಗೆ ಮತ್ತು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯದಿರುವ ಬಗ್ಗೆ ಪ್ರತಿ ತಿಂಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ಘೋಷಿಸಬೇಕು.

* ತಾತ್ಕಾಲಿಕ ಆರ್ಥಿಕ ಭದ್ರತೆ:

ಪದವಿಯ ನಂತರ ಉದ್ಯೋಗ ಲಭಿಸುವವರೆಗೆ ನಿರುದ್ಯೋಗಿ ಯುವಕರ ಕುಟುಂಬಕ್ಕೆ ತಾತ್ಕಾಲಿಕವಾಗಿ ಆರ್ಥಿಕ ಭದ್ರತೆ ಒದಗಿಸುವ ಯೋಜನೆ ಇದಾಗಿದೆ. ಪ್ರತಿ ತಿಂಗಳು ಡಿಬಿಟಿ ಮೂಲಕ ಫಲಾನುಭವಿ ಖಾತೆಗೆ ನಿರುದ್ಯೋಗ ಭತ್ಯೆ ಜಮೆಯಾಗುತ್ತದೆ. ಕರ್ನಾಟಕ ನಿವಾಸಿಯಾಗಿರುವ ಯುವಕರು ಆಧಾರ್ ಕಾರ್ಡ್, ವಾಸಸ್ಥಳ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಶೈಕ್ಷಣಿಕ ದಾಖಲೆಗಳು, ಬ್ಯಾಂಕ್ ಖಾತೆ ವಿವರದೊಂದಿಗೆ `ಸೇವಾ ಸಿಂಧು ಗ್ಯಾರಂಟಿ ಸ್ಕೀಮ್ಸ್' ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

* 2 ವರ್ಷ ಪಾಕೆಟ್ ಮನಿ...! ವಿದ್ಯಾಕಾಶಿ ಎಂದು ಹೆಸರಾಗಿರುವ ಧಾರವಾಡಕ್ಕೆ ಬೇರೆ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ಪದವಿ ವ್ಯಾಸಂಗಕ್ಕೆ ಬರುತ್ತಾರೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಹೀಗೆ ಬರುವ ವಿದ್ಯಾರ್ಥಿಗಳು ಪಾಲಕರನ್ನು ಅವಲಂಬಿಸದೆ, 2 ವರ್ಷಗಳವರೆಗೆ `ಯುವ ನಿಽ' ಯೋಜನೆಯಡಿ ಪಾಕೆಟ್ ಮನಿ ರೂಪದಲ್ಲಿ ಭತ್ಯೆ ಪಡೆಯಲು ಅನುಕೂಲವಾಗಿದೆ ಎನ್ನುತ್ತಾರೆ ಫಲಾನುಭವಿಗಳು.

  • ಯೋಜನೆ ಆರಂಭವಾದಾಗ ಹೆಚ್ಚು ಸ್ಪಂದನೆ ಇರಲಿಲ್ಲ. ಈ ವರ್ಷ ನಿರುದ್ಯೋಗಿ ಯುವಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 6,670 ಪದವಿ ಮತ್ತು ಡಿಪ್ಲೋಮಾ ಪದವೀಧರರು ನೋಂದಣಿ ಮಾಡಿಕೊಂಡಿದ್ದಾರೆ. 4,423 ಫಲಾನುಭವಿಗಳು ಹಣಕಾಸಿನ ನೆರವು ಪಡೆಯುತ್ತಿದ್ದಾರೆ. ಉಳಿದ 2,205 ಜನರಿಗೆ ಪದವಿ ತೇರ್ಗಡೆಯಾಗಿ 180 ದಿನಗಳಾದ ನಂತರ ಡಿಬಿಟಿ ಮೂಲಕ ಯೋಜನೆಯ ಲಾಭ ಪಡೆಯಲಿದ್ದಾರೆ. - ಬಸವಂತ ಪಿ.ಎನ್., ಪ್ರಭಾರ ಸಹಾಯಕ ನಿರ್ದೇಶಕ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net