

ಬೆಳಗಾವಿ: ನಗರ ಸ್ಥಳೀಯ ಸಂಸ್ಥೆಗಳು ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಹಕರಿಸಬೇಕು. ವಿವಿಧ ತೆರಿಗೆಗಳ ಬಾಕಿ ವಸೂಲಾತಿ ಹಾಗೂ ಸರ್ವೇಗಳನ್ನು ಪೂರ್ಣಗೊಳಿಸಿ, ಒತ್ತುವರಿ ಜಮೀನುಗಳನ್ನು ಕಬ್ಜ ತೆಗೆದುಕೊಳ್ಳಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜರುಗಿದ ನಗರ, ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಮಳಿಗೆಗಳ ಲೀಸ್‌ಗಳ ನವೀಕರಣಕ್ಕೆ ಸೂಚಿಸಬೇಕು. ಲೀಸ್ ನವೀಕರಣ ಕುರಿತು ರಿಜಿಸ್ಟರ್ ನಿರ್ವಹಣೆ ಮಾಡಬೇಕು. ನವೀಕರಣಗೊಳಿಸದೆ ಅನಧಿಕೃತ ಮಳಿಗೆಗಳ ಲೀಸ್ ರದ್ದುಗೊಳಿಸಬೇಕು ಎಂದು ತಿಳಿಸಿದರು. ಇಂದಿರಾ ಕ್ಯಾಂಟೀನ್‌ಗಳು ಚಾಲನೆಯಲ್ಲಿರಬೇಕು. ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿಯಾದ ಕಾಮಗಾರಿ ಕುಂಠಿತ ಹಾಗೂ ಇನ್ನಿತರ ಸಾರ್ವಜನಿಕ ತೊಂದರೆಗಳಿಗೆ ಕೂಡಲೇ ಸ್ಪಂದಿಸಬೇಕು. ವರದಿ ಕುರಿತು ತಕ್ಷಣ ಎಚ್ಚೆತ್ತು ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹೊಸ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳ ಸೇರ್ಪಡೆಗೆ, ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಸಂಪರ್ಕ ಕಲ್ಪಿಸಬೇಕು. ಕಸ ವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದಕ್ಕೂ ಮುಂಚೆ ಜಿಲ್ಲೆಯ 35 ನಗರ ಸ್ಥಳೀಯ ಸಂಸ್ಥೆಗಳ ನೇರಪಾವತಿ ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರು ಹಾಗೂ ಲೋಡರ್ ಮತ್ತು ಕ್ಲೀನರ್ ಹುದ್ದೆಗೆ ವಿಶೇಷ ನೇಮಕಾತಿ ನಿಯಮದಂತೆ ಕಾಯಂಗೊಳಿಸಲು ನೇಮಕಾತಿಗೆ ಅರ್ಹರಿರುವ ಎಲ್ಲ ಪೌರಕಾರ್ಮಿಕರೊಂದಿಗೆ ಜಿಲ್ಲಾ ಆಯ್ಕೆ ಸಮಿತಿ ಸಭೆ ಹಮ್ಮಿಕೊಳ್ಳಲಾಯಿತು. ಒಟ್ಟು 194 ಪೌರಕಾರ್ಮಿಕರು ಹಾಗೂ 8 ಲೋಡರ್‌ಗಳನ್ನು ನೇಮಕ ಮಾಡಲು ಶೀಘ್ರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು. ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ್, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಕೀರಪೂರ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಇತರರಿದ್ದರು.