ಗ್ಯಾರಂಟಿ ಈಡೇರಿಸಿದ್ದೇ ನಮಗೆ ದೊಡ್ಡ ಆಸ್ತಿ: ಮಧು ಬಂಗಾರಪ್ಪ

minister madhu bangarappa
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
Published on

ಶಿವಮೊಗ್ಗ: ಮತದಾರರು ಮತ್ತು ರಾಜಕಾರಣಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ಚುನಾವಣೆ ಇದಾಗಿದ್ದು, ಈ ಬಾರಿ ಲೋಕಸಭೆ ಚುನಾವಣೆಯನ್ನು ಹಬ್ಬದ ರೀತಿ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳು ಮತದಾರರ ಬಳಿ ಹೋಗಿ ಮತ ಕೇಳುವುದಾಗುತ್ತಿದೆ. ಆದರೆ ಈ ಸಲ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಮತದಾರರ ಮನೆ ಮನೆಗೂ ತೆರಳಿ ಮನವರಿಕೆ ಮಾಡಿಕೊಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ನಾವು ಯಾವುದೇ ಒಬ್ಬ ವ್ಯಕ್ತಿ ಕೇಂದ್ರಿತ ಅಥವಾ ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳಲಿಲ್ಲ. ಆದರೂ ಗ್ಯಾರಂಟಿಗಳಿಂದ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಜನರ ಒಲವು ಕಾಂಗ್ರೆಸ್ ಕಡೆ ಹೆಚ್ಚಾಗಿದೆ. ವಿಶ್ವಾಸದ ಮೇಲೆ ಗ್ಯಾರಂಟಿಗಳನ್ನು ಜನರಿಗೆ ಕೊಟ್ಟಿದ್ದೇವೆ. ಗ್ಯಾರಂಟಿ ಕೊಡದೇ ಇದ್ದಿದ್ದರೆ ಮತದಾರರ ಬಳಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಮಾತು ಉಳಿಸಿಕೊಂಡಿದ್ದೇ ನಮಗೆ ದೊಡ್ಡ ಆಸ್ತಿಯಾಯಿತು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಕಳೆದ ಬಾರಿಗಿಂತ ಮತದಾನ ಹೆಚ್ಚಾಗಿದೆ. ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನ ಇಲ್ಲ. ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು. ಮುಂಬರುವ ಜಿಪಂ, ತಾಪಂ ಚುನಾವಣೆಗಳನ್ನು ಗೆಲ್ಲುವುದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ, ಮುಖಂಡರಾದ ಕಲಗೋಡು ರತ್ನಾಕರ್, ಎಂ.ಶ್ರೀಕಾಂತ್, ಎಸ್.ರವಿಕುಮಾರ್, ಶ್ರೀನಿವಾಸ್ ಕರಿಯಣ್ಣ, ಜಿ.ಡಿ.ಮಂಜುನಾಥ, ಎಸ್.ಕೆ.ಮರಿಯಪ್ಪ, ಎಸ್.ಪಿ.ಶೇಷಾದ್ರಿ, ಎಚ್.ಪಿ.ಗಿರೀಶ್, ವೈ.ಎಚ್.ನಾಗರಾಜ್, ರಮೇಶ್ ಇಕ್ಕೇರಿ, ಕಲೀಂ, ಶಿವಕುಮಾರ್, ಶ್ರೀಧರ್, ವಿಜಯಕುಮಾರ್, ಎಚ್.ಪಾಲಾಕ್ಷಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net