ಮೈಸೂರು: ನಿರ್ಬಂಧವಿದ್ದರೂ ಶಾಸಕ ಜಿ.ಟಿ.ದೇವೇಗೌಡ ಅವರು 108 ಜನರಿಗೆ ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಅಕ್ರಮವಾಗಿ ಭೂಮಿ ಮಂಜೂರು ಮಾಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ನಗರ ವಕ್ತಾರ ಎಸ್.ರಾಜೇಶ್ ಆರೋಪಿಸಿದರು.
ನಗರಪಾಲಿಕೆ ಗಡಿಯಿಂದ 10 ಕಿಮೀ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಲು ರಾಜ್ಯ ಭೂ ಕಂದಾಯ ಕಾಯ್ದೆಯಲ್ಲಿ ನಿರ್ಬಂಧವಿದೆ. ಆದರೂ ಅಕ್ರಮವಾಗಿ ಮಂಜೂರು ಮಾಡಿಸಿಕೊಡಲು ಮುಂದಾಗಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಶಾಸಕರು ಅನಧಿಕೃತವಾಗಿ ಗೋಮಾಳಗಳಲ್ಲಿ ಸಾಗುವಳಿ ಮಾಡುತ್ತಿರುವ ಒಂದು ಪ್ರಬಲ ಸಮುದಾಯಕ್ಕೆ ಸೇರಿದ ತಮ್ಮ ಬೆಂಬಲಿಗರಿಗೆ ಬಗರ್‌ಹುಕುಂ ಸಮಿತಿಗೆ ಅರ್ಜಿ ಸಲ್ಲಿಸುವಂತೆ ಮಾಡಿ ಹಾಗೂ ಅದಕ್ಕೆ ಅಧಿಕಾರಿಗಳ ಮಟ್ಟದಲ್ಲಿ ಮಂಜೂರಾತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ಮೈಸೂರು ತಾಲೂಕಿನ ಕರಕನಹಳ್ಳಿ, ಬೊಮ್ಮೇನಹಳ್ಳಿ, ಯಲಚಹಳ್ಳಿ, ನಾಗವಾಲ, ಹೆಮ್ಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಗಳು ಕಾನೂನುಬಾಹಿರ ಎಂಬ ಕಾರಣದಿಂದಾಗಿ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂದರು.
ಈಗ ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ತಮ್ಮ ಬೆಂಬಲಿಗರಿಗೆ ಭೂಮಿ ಮಂಜೂರು ಮಾಡಿಸಿಕೊಡುವ ಯತ್ನ ನಡೆಸಿದ್ದು, ಇದನ್ನು ತಾವು ವಿರೋಧಿಸುತ್ತೇವೆ. ಒಂದು ವೇಳೆ ಮಂಜೂರು ಮಾಡಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಮುಖಂಡರಾದ ಎಸ್.ಪ್ರಮೋದ್, ಶಿವಶಂಕರಮೂರ್ತಿ, ಎಸ್.ಎ.ರಹೀಮ್, ರವಿ, ಎಚ್.ಚನ್ನಯ್ಯ ಹಂಚ್ಯ, ಕೆ.ರಾಮು ಇತರರು ಇದ್ದರು.