

ಬೆಂಗಳೂರು: ಪಂಚೆ ಧರಿಸಿದ್ದಕ್ಕೆ ಪ್ರವೇಶ ನಿರಾಕರಿಸಿದ್ದ ನಗರದ ಜಿ.ಟಿ.ಮಾಲ್‌ಅನ್ನು ಒಂದು ವಾರ ಕಾಲ ಬಂದ್ ಮಾಡುವಂತೆ ಬಿಬಿಎಂಪಿ ಆದೇಶ ಹೊರಡಿಸಿದ್ದು, ಗುರುವಾರ ಸಂಜೆಯೇ ಅಧಿಕಾರಿಗಳು ಬೀಗ ಹಾಕಿದ್ದಾರೆ.
ರೈತ ಫಕೀರಪ್ಪ ತನ್ನ ಪುತ್ರನೊಂದಿಗೆ ಮಾಲ್‌ಗೆ ಹೋದಾಗ ಪಂಚೆ ಧರಿಸಿದ್ದಕ್ಕೆ ಮಾಲ್ ಸಿಬ್ಬಂದಿ ತಡೆದಿದ್ದರು. ಇದರ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಜತೆಗೆ ಘಟನೆ ಸಂಬಂಧ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಘಟನೆಗೆ ಮಾಲ್ ಆಡಳಿತ ಮಂಡಳಿ ಕ್ಷಮೆ ಕೋರಿ ಕೀರಪ್ಪಗೆ ಸನ್ಮಾನ ಮಾಡಿದರೂ, ವ್ಯಕ್ತಿಯೊಬ್ಬರಿಗೆ ಅಗೌರವ ಸಲ್ಲಿಸಿರುವುದು ಹಾಗೂ ಟ್ರೇಡ್ ಲೈಸೆನ್ಸ್ ನಿಯಮ ಉಲ್ಲಂಸಿರುವ ಕಾರಣ ಮಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಘಟನೆ ಸಂಬಂಧ ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿದ್ದು, ಶಾಸಕರು ಮಾಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇದಕ್ಕೆ ಸಮಜಾಯಿಷಿ ನೀಡುವ ವೇಳೆ ಸಚಿವ ಬೈರತಿ ಸುರೇಶ್, ಯಾವುದೇ ಮಾಲ್ ರೈತನಿಗೆ ಅಗೌರವ ತೋರಿಸುವುದನ್ನು ಸರ್ಕಾರ ಸಹಿಸುವುದಿಲ್ಲ. ರಾಜ್ಯದಲ್ಲಿ ಎಲ್ಲಿಯೇ ಆದರೂ ಇಂತಹ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದರ ಬೆನ್ನಲ್ಲೇ ಬಿಬಿಎಂಪಿ ಮುಖ್ಯ ಆಯುಕ್ತರ ಸಲಹೆ ಆಧರಿಸಿ ದಕ್ಷಿಣ ವಲಯದ ಅಧಿಕಾರಿಗಳು ಜಿ.ಟಿ.ಮಾಲ್‌ಗೆ ನೋಟಿಸ್ ಜಾರಿ ಮಾಡಿ ಬಂದ್ ಮಾಡುವಂತೆ ಸೂಚಿಸಿದ್ದಾರೆ. ಪಾಲಿಕೆ ಕ್ರಮಕ್ಕೆ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಸ್ವಾಗತಿಸಿವೆ.
ಜಿ.ಟಿ.ಮಾಲ್‌ಗೆ ಡಬಲ್ ಶಾಕ್!
ಪಂಚೆ ಧರಿಸಿದ್ದ ರೈತನನ್ನು ಒಳಬಿಡದ ಅವಮಾನಿಸಿದ್ದ ಜಿ.ಟಿ.ಮಾಲ್‌ಗೆ ಬಿಬಿಎಂಪಿ ಡಬಲ್ ಶಾಕ್ ನೀಡಿದೆ. ರೈತ ಕೀರಪ್ಪಗೆ ಅವಮಾನ ಮಾಡಿದ್ದ ಕಾರಣ ಮಾಲ್‌ಗೆ ನೋಟಿಸ್ ನೀಡಿದ ಬೆನ್ನಲ್ಲೇ, ಆಸ್ತಿತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಮತ್ತೊಂದು ನೋಟಿಸ್ ರವಾನಿಸಿ ಮಾಲ್‌ಗೆ ಬೀಗ ಹಾಕಲಾಗಿದೆ.
ಜಿ.ಟಿ.ಮಾಲ್ 2023-24ನೇ ಸಾಲಿನಲ್ಲಿ 1.78 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. ಜತೆಗೆ 2024-25ನೇ ಸಾಲಿನಲ್ಲೂ 1.78 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಒಟ್ಟು 3.56 ಕೋಟಿ ರೂ. ಆಸ್ತಿತೆರಿಗೆ ಇರುವ ಕಾರಣ ಮಾಲ್‌ಗೆ ಪಾಲಿಕೆ ಅಧಿಕಾರಿಗಳು ಗುರುವಾರ ಬೀಗ ಹಾಕಿದರು.
ಮಾನವ ಸಮಾಜಕ್ಕೆ ಕಪ್ಪು ಚುಕ್ಕೆ: ಎನ್‌ಎಚ್‌ಆರ್‌ಸಿ
ಜಿ.ಟಿ.ಮಾಲ್ನಲ್ಲಿ ರೈತ ಪಕೀರಪ್ಪಗೆ ಅವಮಾನ ಮಾಡಿರುವುದು ಮಾನವ ಸಮಾಜಕ್ಕೆ ಕಪ್ಪು ಚುಕ್ಕೆ ಆಗಿದ್ದು, ಅಮಾನವೀಯತೆ ತೋರಿರುವ ಮಾಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ರಾಧಾ ಕೊಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಾಲ್ ಸಿಬ್ಬಂದಿ ರೈತರ ಮಕ್ಕಳನ್ನು ಕೀಳಾಗಿ ಕಾಣಬಾರದಾಗಿತ್ತು. ಮಾಲ್‌ಗಳಲ್ಲಿ ಮಾರಾಟ ಮಾಡುವ ಹೆಚ್ಚಿನ ಉತ್ಪನ್ನಗಳು ರೈತರೇ ಬೆಳೆದಿರುವುದು ಎಂಬ ಪರಿಜ್ಞಾನ ಇಲ್ಲದಿರುವುದು ವಿಷಾದನೀಯ. ಇಂತಹ ಘಟನೆಗಳು ಮಹಾನಗರಗಳಲ್ಲಿ ಹಳ್ಳಿ ಜನರ ಬಟ್ಟೆಗಳ ಮೇಲೆ ಅಳೆಯುವುದು ಸರಿಯಲ್ಲ. ಬದಲಾಗಿ ಎಲ್ಲರನ್ನೂ ಗೌರವದಿಂದ ಕಾಣುವಂತಾಗಬೇಕು. ಫಕೀರಪ್ಪ ಅವರನ್ನು ಮಾಲ್ ಪ್ರವೇಶಿಸದಂತೆ ನಡೆದ ಘಟನೆ ರೈತರಿಗೆ ಮಾಡಿದ ಅವಮಾನವೂ ಹೌದು. ಅನ್ನದಾತ ದೇಶದ ಬೆನ್ನೆಲುಬು ಎಂಬುದು ಪಠ್ಯಪುಸ್ತಕದಲ್ಲೂ ಅನಾವರಣವಾಗಿದೆ. ಹೀಗಾಗಿ ರೈತನಿಗೆ ಅಗೌರವ ತೋರಿರುವ ಮಾಲ್ ಸಿಬ್ಬಂದಿ ಹಾಗೂ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಧಾ ಕೊಲ್ಲಿ ತಿಳಿಸಿದ್ದಾರೆ.