

ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಭಾನುವಾರ ರಾತ್ರಿಯಿಂದ ಸೋಮವಾರ ಇಡೀ ದಿನ ಜಿಟಿ ಜಿಟಿ ಮಳೆ ಸುರಿದ ಪರಿಣಾಮ ಜನರ ದಿನನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗಿ, ಮಂದಗತಿ ಪಡೆದುಕೊಂಡವು.
ಶನಿವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಭಾನುವಾರ ರಾತ್ರಿಯಿಂದ ಮಳೆ ಪ್ರಾರಂಭವಾಗಿದ್ದು, ಆರಂಭದಿಂದಲೂ ಜಿಟಿಜಿಟಿ ಮಳೆ ಮತ್ತು ಐದು ನಿಮಿಷ ನಂತರ ತಣ್ಣನೆಯ ಗಾಳಿ ಜೋರಾಗಿ ಬೀಸುತ್ತಿತ್ತು. ಈ ಕಣ್ಣಾಮುಚ್ಚಾಲೆ ಆಟ ಇಡೀ ದಿನ ಮುಂದುವರಿಯಿತು.
ಜಟಿ ಮಳೆಯ ಕಾರಣದಿಂದಾಗಿ ಶಾಲೆಗೆ ಹೋಗುವ ಮಕ್ಕಳು ತೊಂದರೆ ಅನುಭವಿಸಿದರು. ಬೈಕ್ ಸವಾರರು ಮಳೆ ಬಂದಾಗ ರಸ್ತೆ ಬದಿಗೆ ಬೈಕ್ ನಿಲ್ಲಿಸಿ, ಮರ ಹಾಗೂ ಕಟ್ಟಡಗಳನ್ನು ಆಶ್ರಯಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು. ಜನನಿಬಿಡ ಪ್ರದೇಶವಾದ ತರಕಾರಿ ಮಾರುಕಟ್ಟೆ, ಮಹಾವೀರ ವೃತ್ತ,ಚಂದ್ರಮೌಳೇಶ್ವರ ವೃತ್ತ, ರಾಜೇಂದ್ರ ಗಂಜ್ ಸ್ಟೇಷನ್ ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿತ್ತು. ಜಡಿ ಮಳೆಯ ಕಾರಣ ಹೆಚ್ಚಿನ ಜನರು ಮನೆಯಲ್ಲೇ ಉಳಿದುಕೊಂಡಿದ್ದರು.
ಜಿಲ್ಲಾಡಳಿತದ ಸೂಚನೆಯಂತೆ ಮಹಾನಗರ ಪಾಲಿಕೆಯಿಂದ ಡೆಂಗಿ ನಿಯಂತ್ರಣಕ್ಕಾಗಿ ಚರಂಡಿ ಸ್ವಚ್ಛತೆಗೆ ಕ್ರಮವಹಿಸಿದೆ. ಆದರೆ, ಚರಂಡಿಯಿಂದ ಹೊರತೆಗೆದ ತ್ಯಾಜ್ಯವನ್ನು ರಸ್ತೆ ಪಕ್ಕದಲ್ಲೇ ಬಿಟ್ಟಿದ್ದಾರೆ. ತ್ಯಾಜ್ಯವನ್ನು ಹೊರತೆಗೆದು ಅದನ್ನು ವಿಲೇವಾರಿ ಮಾಡಿಲ್ಲ. ಸೋಮವಾರ ಸುರಿದ ಜಿಟಿಜಿಟಿ ಮಳೆಗೆ ಚರಂಡಿ ತ್ಯಾಜ್ಯವೆಲ್ಲವೂ ರಸ್ತೆಯ ಮೇಲೆ ಹರಡಿ ಬಿದ್ದಿತ್ತು. ಇದು ಸಾಂಕ್ರಾಮಿಕ ರೋಗಭೀತಿ ಮತ್ತಷ್ಟು ಹೆಚ್ಚಿಸಿತ್ತು. ಚರಂಡಿ ತ್ಯಾಜ್ಯ ವಿಲೇವಾರಿಗೆ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಂತ 24 ಗಂಟೆಯಲ್ಲಿ ಒಟ್ಟು 18 ಮಿ.ಮೀ. ಮಳೆಯಾಗಿದೆ. ಈ ಪೈಕಿ ದೇವದುರ್ಗ 18.8 ಮಿ.ಮೀ.,ಲಿಂಗಸುಗೂರು 14.9 ಮಿ.ಮೀ.,ಮಾನ್ವಿ 19.3 ಮಿ.ಮೀ.,ರಾಯಚೂರು 31.5 ಮಿ.ಮೀ.,ಸಿಂಧನೂರು 9.4 ಮಿ.ಮೀ.,ಮಸ್ಕಿ 11.3 ಮಿ.ಮೀ. ಮತ್ತು ಸಿರವಾರದಲ್ಲಿ 19.3 ಮಿ.ಮೀ. ಮಳೆಯಾಗಿದೆ.