

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ತೆರಿಗೆ ಸಮಿತಿ ಅಡಿಯಲ್ಲಿ ಕೇಂದ್ರ ಬಜೆಟ್ 2024ರ ಆದಾಯ ತೆರಿಗೆ ಮತ್ತು ಸರಕು, ಸೇವಾ ತೆರಿಗೆಯಲ್ಲಿನ (ಜಿಎಸ್ಟಿ) ಇತ್ತೀಚಿನ ಬದಲಾವಣೆಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು.
ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ ಕಾರ್ಯಕ್ರಮ ಉದ್ಘಾಟಿಸಿದರು. ಖ್ಯಾತ ಲೆಕ್ಕಪರಿಶೋಧಕರಾದ ಶಂಭುಲಿಂಗಪ್ಪ ಪಾಟೀಲ್ ಮತ್ತು ಕಿರಣ್ ಶಾವಿ ಅವರು ಆದಾಯ ತೆರಿಗೆ ಮತ್ತು ಜಿಎಸ್ಟಿ ಕುರಿತು ತಿಳಿವಳಿಕೆ ನೀಡಿದರು.
ಹಣಕಾಸು ಕಾಯಿದೆ 2024ರ ಪ್ರಕಾರ ಆದಾಯ ತೆರಿಗೆ ಕಾಯಿದೆಯಲ್ಲಿ ಪರಿಚಯಿಸಲಾದ ಮಹತ್ವದ ತಿದ್ದುಪಡಿಗಳ ವಿಶ್ಲೇಷಣೆಯನ್ನು ಶಂಭುಲಿಂಗಪ್ಪ ಅವರು ಮಾಡಿದರು. ಜಿಎಸ್ಟಿ ಕಾನೂನುಗಳಲ್ಲಿನ ಶಾಸನಾತ್ಮಕ ಬದಲಾವಣೆಗಳು, ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಸಿಜಿಎಸ್ಟಿ ಕಾಯಿದೆ. ವ್ಯಾಪಾರವನ್ನು ಸುಗಮಗೊಳಿಸುವ ಗುರಿ ಹೊಂದಿರುವ ತಿದ್ದುಪಡಿಗಳನ್ನು ಕಿರಣ್ ಶಾವಿ ಅವರು ವಿವರಿಸಿದರು.
ಸದಸ್ಯರ ಪ್ರಶ್ನೆಗಳು, ಸಂಶಯಗಳಿಗೆ ಪರಿಹಾರ ಒದಗಿಸಿದರು. ಕೆಸಿಸಿಐ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ತೆರಿಗೆ ಸಮಿತಿ ಚೇರ್ಮನ್ ಕಾರ್ತಿಕ ಶೆಟ್ಟಿ, ಸಂಸ್ಥೆಯ ಸದಸ್ಯರು, ಸ್ಥಳಿಯ ವ್ಯಾಪಾರಸ್ಥರು, ಉದ್ದಿಮೆದಾರರು, ಸಿಎ, ತೆರಿಗೆ ಸಲಹೆಗಾರರು, ಭಾಗವಹಿಸಿದ್ದರು.