ಜಿಎಸ್‌ಟಿಯ ಸ್ಪಷ್ಟ ಅರಿವು ಅಗತ್ಯ; ಎಸ್‌ಜಿಎಸ್‌ಟಿಒ ಮಂಗಳೂರು ಸಹಾಯಕ ಆಯುಕ್ತೆ ಹೇಮಲತಾ

mng-july27-kcci3
Published on

ಮಂಗಳೂರು: ಜಿಎಸ್‌ಟಿ ಕೌನ್ಸಿಲ್ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಕೆಲವೊಂದು ಬದಲಾವಣೆ, ಹೊಸ ಅಂಶಗಳನ್ನು ಸೇರ್ಪಡೆಗೊಳಿಸುತ್ತಿದ್ದು, ಇವುಗಳ ಕುರಿತು ವ್ಯಾಪಾರಿಗಳು, ಉದ್ದಿಮೆದಾರರು ಸ್ಪಷ್ಟವಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಈ ಬಾರಿಯ ಸಭೆಯಲ್ಲೂ ಕೆಲವೊಂದು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ ಎಂದು ಎಸ್‌ಜಿಎಸ್‌ಟಿಒ-260 ಮಂಗಳೂರು ಸಹಾಯಕ ಆಯುಕ್ತೆ ಹೇಮಲತಾ ಹೇಳಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ 47ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನಗಳು ಮತ್ತು ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಬುಧವಾರ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಬಾರಿ ಪ್ರಿಪ್ಯಾಕ್ಡ್, ಲೇಬಲ್ ಅಳವಡಿಸಲಾದ ಮತ್ತು ಬ್ರಾೃಂಡೆಡ್ ಉತ್ಪನ್ನಗಳಿಗೆ ಸಂಬಂಧಿಸಿದಂತೆ ವಿಶೇಷ ಬದಲಾವಣೆಗಳನ್ನು ಮಾಡಿ, ಜಿಎಸ್‌ಟಿಯಡಿ ತರಲಾಗಿದೆ. ಯಾವುದು ತೆರಿಗೆಯಡಿ ಬರುತ್ತದೆ ಮತ್ತು ಯಾವುದು ಬರುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು ಎಂದ ಅವರು, ಜಿಎಸ್‌ಟಿ ನಿಯಮಾವಳಿಗಳಲ್ಲಿ ಆಗಿರುವ ಕೆಲವೊಂದು ಬದಲಾವಣೆಗಳ ಕುರಿತಂತೆ ವಿವರಿಸಿದರು. ಇವುಗಳಲ್ಲಿ ಇನ್ನಷ್ಟು ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಜಿಎಸ್‌ಟಿ ಕೌನ್ಸಿಲ್ ಅವಕಾಶ ನೀಡಿದ್ದು, ವ್ಯಾಪಾರೋದ್ಯಮಿಗಳು ವೆಬ್‌ಸೈಟ್‌ನಲ್ಲಿ ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದರು.
ಜಿಎಸ್‌ಟಿಯಡಿ ಇ-ಇನ್‌ವಾಯ್ಸ ಮತ್ತು ಇತರ ಕಷ್ಟಕರ ಅನುಕರಣೆಗಳ ಕುರಿತು ಸಿಎ ವಿಕಾಸ್ ಶೆಣೈ ಮಾತನಾಡಿದರು.
ಕಾರ್ಯದರ್ಶಿ ನಿಸಾರ್ ಫಕೀರ್ ಮೊಹಮ್ಮದ್ ಮತ್ತು ಖಜಾಂಚಿ ಅಬ್ದುರ್ ರೆಹಮಾನ್ ಮುಸ್ಬಾ ಉಪಸ್ಥಿತರಿದ್ದರು. ಕೆಸಿಸಿಐ ಅಧ್ಯಕ್ಷ ಶಶಿಧರ ಪೈ ಮಾರೂರು ಸ್ವಾಗತಿಸಿದರು. ಉಪಾಧ್ಯಕ್ಷ ಗಣೇಶ್ ಕಾಮತ್ ಅತಿಥಿಗಳನ್ನು ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net