

ಮೈಸೂರು: ಜಿಎಸ್‌ಟಿ ತೆರಿಗೆ ಇಳಿಕೆಯ ಲಾಡು ಬಿಜೆಪಿಯವರಿಗೆ ಸಿಹಿ ಆಗಬಹುದೇ ಹೊರತು ರಾಜ್ಯದ ತೆರಿಗೆ ಪಾವತಿದಾರರಿಗೆ ಯಾವುದೇ ಲಾಭವಿಲ್ಲ ಎಂದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ಸುಧಾರಣೆಯಿಂದ ಜನರ ಕೈಗೆ 2.50 ಲಕ್ಷ ಕೋಟಿ ರೂ. ಸೇರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ತಿಳಿಸಿದ್ದಾರೆ. ಹೀಗಾಗಿ ಜಿಎಸ್‌ಟಿ ತೆರಿಗೆ ಇಳಿಕೆ ಆಯಿತು ಎಂದು ಬಿಜೆಪಿ ನಾಯಕರು ಜನರಿಗೆ ಲಾಡು ತಿನ್ನಿಸುತ್ತಿದ್ದಾರೆ. ಆದರೆ, ತೆರಿಗೆ ಇಳಿಕೆಯಿಂದ ಜನರಿಗೆ ದೊಡ್ಡ ಪ್ರಯೋಜನ ಏನು ಇಲ್ಲ ಎಂದರು.
2.50 ಲಕ್ಷ ಕೋಟಿ ರೂ.ಗಳನ್ನು ತಲಾವಾರು ಹಂಚಿಕೆ ಮಾಡಿದರೆ ಪ್ರತಿಯೊಬ್ಬರಿಗೆ ದೊರೆಯುವುದು ವರ್ಷಕ್ಕೆ 57 ರೂ. ಮಾತ್ರ. ಆದರೆ, ಸಿದ್ದರಾಮಯ್ಯ ರಾಜ್ಯದ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ. ನೀಡುತ್ತಿದ್ದಾರೆ. ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದಾರೆ. ಬಿಪೆಪಿ ನಾಯಕರು ಇಂತಹ ವಿಚಾರ ಚರ್ಚೆ ಮಾಡುವುದಿಲ್ಲ. ಆದರೆ, ಗಣೇಶ ವಿಚಾರದಲ್ಲಿ ಗಲಾಟೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಹಿಂದುಗಳ ಜಾತಿಯ ಮುಂದೆ ಕ್ರಿಶ್ಚಿಯನ್ ಪದ ಸೇರ್ಪಡೆಯನ್ನು ಕೈ ಬಿಡಲಾಗಿದೆ. ಸಮೀಕ್ಷೆ ಮೂಲಕ ಹಿಂದುಗಳ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಕ್ಕೆ ಅರ್ಥವಿಲ್ಲ. ಸಮೀಕ್ಷೆ ಮೂಲಕ ಹಿಂದುಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವೇ? ಮೊಟ್ಟಮೊದಲನೆಯದಾಗಿ ಇದು ಜಾತಿ ಗಣತಿಯೇ ಅಲ್ಲ. ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುತ್ತಿದ್ದು, ನಾವು ಜಾತಿವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದೇವೆ. ಜನರು ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ಸರ್ಕಾರ ನೋಡಬಾರದೇ? ಜನರ ಸ್ಥಿತಿಗತಿ ನೋಡಿ ಅವರ ಪರವಾದ ಯೋಜನೆ ರೂಪಿಸಲು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸಹಕಾರಿಯಾಗಲಿದೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ ಬಿಜೆಪಿ ವಿಧಾನಸಭೆಯಲ್ಲಿ ಮತ್ತಷ್ಟು ಸೌಲಭ್ಯಗಳನ್ನು ನೀಡಿ ಎಂದು ಸಂತಸ ವ್ಯಕ್ತಪಡಿಸಿ ದ್ದಾರೆ. ಇವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ? ಕೇಂದ್ರ ಸರ್ಕಾರ ಸಹ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದೆ. ಬಿಜೆಪಿ ಕೆಲವು ರಾಜ್ಯಗಳಲ್ಲಿ ಅನುಷ್ಠಾನ ಸಹ ಮಾಡಿದೆ. ಇದರ ಬಗ್ಗೆಯೂ ಚರ್ಚೆ ನಡೆಯಬೇಕಲ್ಲವೇ?
ಕೇಂದ್ರ ಸರ್ಕಾರ ಪ್ರತಿ ವಿದ್ಯಾರ್ಥಿಯ ಶಿಕ್ಷಣಕ್ಕೆ 7 ಸಾವಿರ ರೂ.ಖರ್ಚು ಮಾಡಬೇಕು. ಆದರೆ, ಕೇಂದ್ರ ಸರ್ಕಾರ ನೀಡುತ್ತಿರುವುದು ಕೇವಲ 2,800 ರೂ. ಮಾತ್ರ. ಹೀಗಿದ್ದರೂ ರಾಜ್ಯ ಸರ್ಕಾರ ಮಕ್ಕಳಿಗೆ ಯಾವುದೇ ರೀತಿಯ ಕೊರತೆ ಮಾಡದೆ ಎಲ್ಲ ಸವಲತ್ತುಗಳನ್ನು ನೀಡುತ್ತಿದೆ. ಹಾಲು, ಮೊಟ್ಟೆ ನೀಡಿ ಮಕ್ಕಳ ಆರೋಗ್ಯ ವೃದ್ಧಿಸುತ್ತಿದ್ದೇವೆ. ನಮ್ಮಲ್ಲಿ ಖಜಾನೆ ಖಾಲಿಯಾಗಿದ್ದರೆ ಇದು ಸಾಧ್ಯವಾಗುತಿತ್ತೇ. ಮುಂದಿನ ವರ್ಷದಿಂದ ನೋಟ್ ಪುಸ್ತಕವನ್ನು ಸಹ ಉಚಿತವಾಗಿ ನೀಡುತ್ತೇವೆ ಎಂದರು.