ಬಿಹಾರ ಚುನಾವಣೆಗಾಗಿ ಜಿಎಸ್​ಟಿ ದರ ಕಡಿತ

devargudihaal
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ದರ ಇಳಿಕೆ ಬಗ್ಗೆ ಬಿಜೆಪಿಯವರು ದೊಡ್ಡ ಭಾಷಣ ಮಾಡುತ್ತಿದ್ದಾರೆ. ಇವರೇ ಹೆಚ್ಚಿಗೆ ಮಾಡಿ, ಈಗ ಕಡಿಮೆ ಮಾಡಿರುವುದಕ್ಕೆ ವಿಜಯೋತ್ಸವ ಆಚರಿಸುತ್ತಿದ್ದಾರೆ. ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಎಸ್​ಟಿ ದರ ಇಳಿಕೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ದೇವರ ಗುಡಿಹಾಳ ರಸ್ತೆಯ ವಿಶಾಲ ನಗರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಹೆಸ್ಕಾಂ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಹಾರದಲ್ಲಿ ಚುನಾವಣೆ ಬಂದಿದೆ ಎಂದು ಮಹಿಳೆಯರಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬಿಹಾರದಲ್ಲಿ ಬಿಜೆಪಿ ಪ್ರಗತಿ ಏನು.? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವ್ಯಕ್ತಿಯ ತಲಾ ಆದಾಯ ಕಡಿಮೆ ಇದೆ. ಸೈನಿಕರು ಮಾಡಿರುವ ಕೆಲಸಕ್ಕೆ ಪ್ರಧಾನಿ ಮೋದಿಯವರು ಸಿಂಧೂರ ಎಂದು ಮತ ಕೇಳಲು ಹೋಗುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿರುವ 60 ಸಾವಿರ ಕೋಟಿ ರೂ. ಹಣ ನೇರವಾಗಿ ಜನರಿಗೆ ತಲುಪುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಖಾಲಿಯಾಗಲಿದೆ ಎಂದು ಟೀಕಿಸುತ್ತಿದ್ದರು. ಆದರೆ ಇಂದು ಅವರ ನಿರೀಕ್ಷೆಗೂ ಮೀರಿ ಯೋಜನೆಗಳು ಯಶಸ್ವಿಯಾಗಿವೆ ಎಂದು ಹೇಳಿದರು.

ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ದೇವರ ಗುಡಿಹಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌರಿ ಅವರ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net