ಜಿಎಸ್‌ಟಿ ಬೆಳೆಗಾರರ ಸಮಸ್ಯೆ ಹೆಚ್ಚಿಸಿದೆ: ಪೂವಯ್ಯ

cofeee
Published on

ಮಡಿಕೇರಿ: ಕರಿಮೆಣಸು ಬೆಳೆ ಮೇಲೆ ಸರ್ಕಾರ ಜಿಎಸ್‌ಟಿ ವಿಧಿಸಿರುವುದರಿಂದಾಗಿ ಬೆಳೆಗಾರರ ಸಮಸ್ಯೆ ಹೆಚ್ಚಾಗಿದ್ದು ಕೇಂದ್ರ ಸರ್ಕಾರ ಕರಿಮೆಣಸು ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ತೆಗೆದುಹಾಕುವ ಮೂಲಕ ಕೃಷಿಕರ ಪರವಾಗಿ ನಿಲುವು ತಳೆಯಬೇಕಾಗಿದೆ ಎಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್‌ನ ನಿರ್ದೇಶಕ ತೇಲಪಂಡ ಪೂವಯ್ಯ ಒತ್ತಾಯಿಸಿದರು.


ನಗರದಲ್ಲಿ ಮಂಗಳವಾರ ನಡೆದ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪೂವಯ್ಯ, ಕರಿಮೆಣಸು ಫಸಲಿನ ಮೇಲೂ ಜಿಎಸ್‌ಟಿ ವಿಧಿಸಿರುವುದು ಸರಿಯಾದ ಕ್ರಮವಲ್ಲ. ನಿಯಮಪ್ರಕಾರವಾಗಿ ಕರಿಮೆಣಸು ಜಿಎಸ್‌ಟಿ ವ್ಯಾಪ್ತಿಗೆ ಸೇರಿದ್ದರೂ ಕೃಷಿ ಫಸಲಾಗಿರುವುದರಿಂದಾಗಿ ಜಿಎಸ್‌ಟಿ ವಿಧಿಸುವುದರಿಂದ ವಿನಾಯಿತಿ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಬೆಳೆಗಾರ ಸಂಘಟನೆಗಳು ಈಗಾಗಲೇ ಕೇಂದ್ರ ಸರ್ಕಾರದ ಗಮನ ಸೆಳೆದಿವೆ ಎಂದರು.


ಕಾನೂನುಗಳನ್ನು ಏಕಪ್ರಕಾರವಾಗಿ ಬೆಳೆಗಾರರಿಗೂ ವಿಧಿಸುವುದರಿಂದಾಗಿ ಬೆಳೆಗಾರರ ಸಮಸ್ಯೆ ಮತ್ತಷ್ಟು ಹೆಚ್ಚಾಗಿ ಕೃಷಿ ಚಟುವಟಿಕೆಗಳಿಂದ ಅನೇಕರು ವಿಮುಖರಾಗುತ್ತಿರುವ ವಿದ್ಯಮಾನಕ್ಕೆ ಕಾರಣವಾಗಬಹುದು. ಬ್ರೆಜಿಲ್ ವಿಯಟ್ನಾಂ ಸೇರಿದಂತೆ ವಿಶ್ವದ ಕಾಫಿ ಕ್ಷೇತ್ರದ ಆಗುಹೋಗುಗಳನ್ನು ಗಮನಿಸಿದರೆ ಭಾರತೀಯ ಕಾಫಿಗೆ ಉತ್ತಮ ಭವಿಷ್ಯವಿರುವುದು ಸ್ಪಷ್ಟ. ಭಾರತದಲ್ಲಿ ಕಾಫಿಯ ಆಂತರಿಕ ಬಳಕೆ ಶೇ.೮ ರಷ್ಟು ಹೆಚ್ಚಾಗುತ್ತಿರುವುದು ಕೂಡ ಕಾಫಿ ರಂಗಕ್ಕೆ ಆಶಾದಾಯಕವಾಗಿ ಪರಿಣಮಿಸಿದೆ ಎಂದು ಪೂವಯ್ಯ ಹೇಳಿದರು.


ಪ್ರಾಕತ್ತಿಕ ವಿಕೋಪ ಸಂಭವಿಸಿದಾಗ ಕೃಷಿ ಫಸಲು ನಷ್ಟಕ್ಕೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಆದರೆ, ಪರಿಹಾರವನ್ನೂ ಪ್ರಾಕತ್ತಿಕ ವಿಕೋಪದಿಂದ ಹಾನಿಗೊಳಗಾದ ಭೂಮಿಗೂ ನೀಡಿ ಪರಿಹಾರವನ್ನು ಹೆಚ್ಚಿಸುವ ನಿಯಮ ಜಾರಿಯಾಗಬೇಕು. ಇಲ್ಲದೋ ಹೋದಲ್ಲಿ ಬೆಳೆಯೊಂದಿಗೆ ಭೂಮಿ ಕೂಡ ಕಳೆದುಕೊಂಡ ಬೆಳೆಗಾರ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾನೆ ಎಂದು ಕಳವಳ ವ್ಯಕ್ತಪಡಿಸಿದರು.


ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಮಾತನಾಡಿ, ಮಹಿಳೆಯರೇ ಸೇರಿ ಕಾಫಿ ಸೇವನೆಯನ್ನು ಪ್ರೋತ್ಸಾಹಿಸುವ ಸಂಘ ಸ್ಥಾಪಿಸಿ ೨೩ ವರ್ಷಗಳು ಕಳೆದಿವೆ. ಸಂಘಕ್ಕೆ ಪ್ರತೀ ವರ್ಷವೂ ಯುವತಿಯರೂ ಸೇರಿದಂತೆ ಸದಸ್ಯೆಯರಾಗಿ ಹೆಚ್ಚಿನವರು ಸೇರ್ಪಡೆಯಾಗುತ್ತಿರುವುದು ಸಂಘದ ಬೆಳವಣಿಗೆ ನಿಟ್ಟಿನಲ್ಲಿ ಶ್ಲಾಘನೀಯವಾಗಿದೆ ಎಂದರು


ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಅನಿತಾ ನಂದ, ಜಂಟಿ ಕಾರ್ಯದರ್ಶಿ ರಾಣಿನರೇಂದ್ರ, ಸಂಘಟನಾ ಕಾರ್ಯದರ್ಶಿ ರೀಟಾ ದೇಚಮ್ಮ, ಖಜಾಂಜಿ ಕುಮಾರಿ ಕುಂಜ್ಞಪ್ಪ ವೇದಿಕೆಯಲ್ಲಿದ್ದರು, ಸರುಸತೀಶ್ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಕಾರುಗುಂದದ ರಮ್ಯ ನರೇನ್ ಕಾಫಿ ಕೆಫೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಮಹಿಳಾ ಸದಸ್ಯೆಯರು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾಫಿ ದಸರಾಕ್ಕೆ ಸಹಕಾರ
ಮಡಿಕೇರಿ ದಸರಾದಲ್ಲಿ ಈ ವರ್ಷದಿಂದ ಕಾಫಿ ದಸರಾ ಎಂಬ ಹೊಸ ಕಾರ್ಯಕ್ರಮ ಸೇರ್ಪಡೆಯಾಗುತ್ತಿದ್ದು, ಕಾಫಿಗೆ ಸಂಬಂಧಿಸಿದಂತೆ ೩೨ ಮಳಿಗೆಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಅ.೬ ಮತ್ತು ೭ ರಂದು ಕಾಫಿ ದಸರಾ ಸಂದರ್ಭ ಕಾಫಿ ಮತ್ತು ಇತರ ಕೃಷಿ ಸಂಬಂಧಿತ ಬೆಳೆಗಾರರಿಗೆ ಸೂಕ್ರ ಮಾಹಿತಿ ನೀಡಲಾಗುತ್ತದೆ. ಮಹಿಳಾ ಕಾಫಿ ಜಾಗ್ರತಿ ಸಂಘದ ಸದಸ್ಯೆಯರೂ ಕಾಫಿ ದಸರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾಫಿ, ಮತ್ತಿತರ ಕೃಷಿ ಸಂಬಂಧಿತ ಬೆಳೆಗಳ ಮಾಹಿತಿಯ ಸದುಪಯೋಗ ಪಡೆದುಕೊಳ್ಳುವಂತೆ ಮಡಿಕೇರಿ ದಸರಾ ಸಾಂಸ್ಕತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಕಾರ್ಯಕ್ರಮದಲ್ಲಿ ಮನವಿ ಮಾಡಿದರು. ಸಂಘದ ವತಿಯಿಂದ ಕಾಫಿ ದಸರಾಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net