ಜಿಎಸ್​ಟಿ ಬದಲಾವಣೆ ಕೇಂದ್ರದ ಐತಿಹಾಸಿಕ ನಿರ್ಧಾರ

Mahesh Tenginakayi
Published on

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಆರ್ಥಿಕ ವಲಯವನ್ನು ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಜಿಎಸ್​ಟಿ ಎರಡು ಸ್ಲಾಬ್​ಗಳಲ್ಲಿ ಭಾರಿ ಬದಲಾವಣೆ ತಂದಿರುವುದು ಮಹತ್ವದ ನಿರ್ಧಾರವಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಈ ಐತಿಹಾಸಿಕ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ.

ಕ್ಯಾನ್ಸರ್ ಜೀವ ರಕ್ಷಕ ಮಾತ್ರೆಗಳು ಸೇರಿದಂತೆ ಇತರ ಬಳಸುವ 33 ಜೀವ ರಕ್ಷಕ ಔಷಧಿಗಳ ಮೇಲಿನ ಜಿಎಸ್​ಟಿ ಯನ್ನು ಶೇ. 5 ರಿಂದ ಈಗ ಶೂನ್ಯ ಮಾಡಲಾಗಿದೆ. ನೋಟ್​ಬುಕ್ ಹಾಗೂ ಇನ್ನಿತರ ಶೈಕ್ಷಣಿಕ ಸಾಮಗ್ರಿಗಳ ಬೆಲೆ ಅಗ್ಗವಾಗಲಿದೆ.  ಪಂಪ್​ಸೆಟ್ ಸೇರಿದಂತೆ ಇನ್ನಿತರ ಕೃಷಿ ಸಲಕರಣೆಗಳ ಬೆಲೆಯಲ್ಲಿ ಭಾರಿ ಬದಲಾವಣೆಗಳಾಗಿವೆ ಎಂದಿದ್ದಾರೆ.

ಈ ಮುಂಚೆ ಎಲ್ಲ ಉತ್ಪನ್ನಗಳು ಜಿಎಸ್​ಟಿ ವ್ಯಾಪ್ತಿಗೆ ಬರುವುದರಿಂದ ಹಾಲು, ಮೊಸರು ಸೇರಿದಂತೆ ಔಷಧಿ ಉತ್ಪನ್ನಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿತ್ತು. ಈಗ ಕೆಲ ವಸ್ತುಗಳನ್ನು ಜಿಎಸ್​ಟಿ ವಿನಾಯಿತಿ ನೀಡಿದ್ದು, ಸೆ. 22ರ ನಂತರ ಆದೇಶ ಜಾರಿಯಾಗಿ ಬೆಲೆಗಳು ಇಳಿಕೆಯಾಗಲಿವೆ ಎಂದು ತಿಳಿಸಿದ್ದಾರೆ.

ಈ ನಿರ್ಧಾರವು ದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ದಸರಾ ಮತ್ತು ದೀಪಾವಳಿಯ ಬಂಪರ್ ಕೊಡಿಗೆಯಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ರಾಹುಲ್ ಗಾಂಧಿ ಅವರು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕೆ ಮಾಡಿದ್ದರು. ಈಗ ಅವರು ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net