

ಶಿವಮೊಗ್ಗ: ಜಿಎಸ್‌ಟಿಯಿಂದ ದೇಶದ ಆರ್ಥಿಕ ಅಭಿವೃದ್ಧಿಯಾಗಿದ್ದು, ಭಾರತ ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಪ್ರಪಂಚದ ಅನೇಕ ದೇಶಗಳ ಕೈಗಾರಿಕೆಗಳು ಭಾರತದತ್ತ ಮುಖ ಮಾಡಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಜಿಎಸ್‌ಟಿ ಕಡಿತದ ಹಿನ್ನೆಲೆಯಲ್ಲಿ ನಗರದ ಶಿವಪ್ಪನಾಯಕ ವೃತ್ತದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಮರ್ಪಣೆ ಮಾಡಿ ಮಾತನಾಡಿದ ಅವರು, ಜಿಎಸ್‌ಟಿ ಕೌನ್ಸಿಲ್ ಹಾಗೂ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿಗಳ ಆಶಯದಂತೆ ದೇಶದ ಜನರಿಗೆ ಜಿಎಸ್‌ಟಿ 2.0 ಐತಿಹಾಸಿಕ ಸುಧಾರಣೆಗಳನ್ನು ತರಲಾಗಿದೆ. ಇದರಿಂದ ದೇಶದ ಜನರ ದಿನಬಳಕೆ ವಸ್ತುಗಳ ದರ ಇಳಿಕೆಯಾಗಲಿದೆ ಎಂದರು.
ಇದೊಂದು ಐತಿಹಾಸಿಕ ನಿರ್ಧಾರ. ಆದರೆ ಕಾಂಗ್ರೆಸ್ ಇದರ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಜಿಎಸ್‌ಟಿ ಕೌನ್ಸಿಲ್ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲ ರಾಜ್ಯಗಳ ವಿತ್ತ ಸಚಿವರು ಅದಕ್ಕೆ ಅನುಮೋದನೆ ನೀಡಿದ್ದಾರೆ. ಈಗಿನ ನಿರ್ಧಾರದಿಂದ ಇಡೀ ದೇಶದಲ್ಲಿ ಬಡ ಹಾಗೂ ಮಧ್ಯಮ ವರ್ಗದ, ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ದಿನಬಳಕೆಯ ಪ್ರಮುಖ ವಸ್ತುಗಳು ಮತ್ತು ವೈದ್ಯಕೀಯ ವೆಚ್ಚಗಳಲ್ಲೂ ಉಳಿತಾಯವಾಗಲಿದೆ. ಜನಸಾಮಾನ್ಯರಿಗೆ ದರಗಳಲ್ಲಿ ಕಡಿತವಾದರೆ ವ್ಯಾಪಾರಿಗಳು ಉತ್ಪಾದನೆ ಹೆಚ್ಚಿಸಿಕೊಳ್ಳಬಹುದು. ವಸ್ತುಗಳಿಗೆ ಬೇಡಿಕೆಯೂ ಹೆಚ್ಚಲಿದೆ. ವರ್ತಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.
ಶಿವಪ್ಪನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಎಂ.ಬಿ.ಹರಿಕೃಷ್ಣ, ಮಾಜಿ ಉಪಮೇಯರ್ ಸುರೇಖಾ ಮುರಳೀಧರ್, ಪ್ರಮುಖರಾದ ಮಂಗಳಾ ನಾಗೇಂದ್ರ, ಸುಮಿತ್ರಾ ಮುಂತಾದವರಿದ್ದರು.