ಜಿಎಸ್‌ಟಿ ರದ್ದು ಮಾಡಲು ಒತ್ತಾಯ

GST
Published on

ಮೈಸೂರು: ಜನಸಾಮಾನ್ಯರ ಜೀವನಕ್ಕೆ ಹೊರೆಯಾಗಿರುವ ಜಿಎಸ್‌ಟಿ ರದ್ದುಗೊಳಿಸುವಂತೆ ಕರ್ನಾಟಕ ಮತದಾರರ ಜಾಗೃತಿ ವೇದಿಕೆ ಒತ್ತಾಯಿಸಿದೆ.

ಜನಸಾಮಾನ್ಯರು ನಿತ್ಯ ಬಳಸುವ ಅಕ್ಕಿ, ಗೋಧಿಯೊಂದಿಗೆ ಪ್ಯಾಕ್ ಮತ್ತು ಲೇಬಲ್ ಹೊಂದಿರುವ ಮೀನು, ಮಾಂಸ, ಮೊಸರು, ತುಪ್ಪ ಮುಂತಾದ ಅಗತ್ಯವಸ್ತುಗಳಿಗೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಿರುವುದು ಸರಿಯಲ್ಲ. ಇದರಿಂದ ಬಡವರು ಹಾಗೂ ಮಧ್ಯಮ ವರ್ಗದವರ ಜೀವನ ನಿರ್ವಹಣೆಗೆ ಹೊರೆಯಾಗಿದೆ. ನಿತ್ಯದ ವಸ್ತುಗಳ ಬೆಲೆ ಏರಿಕೆ ನಡುವೆ ಜಿಎಸ್‌ಟಿಯ ಗದಾಪ್ರಹಾರ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದು ವೇದಿಕೆಯ ಗೌರವಾಧ್ಯಕ್ಷ ಕೆ.ಟಿ.ಲಿಂಗರಾಜು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಜನರು ಹಸಿವು ನೀಗಿಸಿಕೊಳ್ಳಲು ಹೋಟೆಲ್‌ಗೆ ಹೋದರೆ ಅದಕ್ಕೂ ಜಿಎಸ್‌ಟಿ ಕೊಡಬೇಕಿದೆ. ಇದೀಗ ದುಡಿದ ಹಣದಲ್ಲಿ ದಿನಸಿ ಕೊಂಡು ಮನೆಯಲ್ಲೇ ಊಟ, ತಿಂಡಿ ಮಾಡಲು ಸಹ ಜಿಎಸ್‌ಟಿ ತೆರಬೇಕಾಗಿರುವುದು ದುರಂತ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ಬದುಕಿಗೆ ಮಾರಕವಾಗಿದ್ದು, ಈ ಪದ್ಧತಿಯನ್ನು ಕೂಡಲೇ ಕೈಬಿಡಬೇಕು. ಈ ಹಿಂದಿನ ತೆರಿಗೆ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಜಿಎಸ್‌ಟಿ ತೆರಿಗೆ ಹೊರೆಯನ್ನು ರಾಜ್ಯಗಳ ಮೇಲೆ ಹೇರಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡಲಿದೆ ಎಂದು ಈಗಾಗಲೇ ಸುಪ್ರೀಂಕೋರ್ಟ್ ಆಕ್ಷೇಪಿಸಿದೆ. ಇಂತಹ ಜನವಿರೋಧಿ ತೆರಿಗೆ ವ್ಯವಸ್ಥೆ ಜಾರಿಗೆ ತಂದಿರುವುದನ್ನು ಜನಪ್ರತಿನಿಧಿಗಳು ಪಕ್ಷಬೇಧ ಮರೆತು ವಿರೋಧಿಸುವ ಮೂಲಕ ಮತದಾರರ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಮಾ.ವೆಂಕಟೇಶ್, ಕಾನೂನು ಸಲಹೆಗಾರ ಎಂ.ಎನ್.ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net