

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಗಜಪಡೆಯ ಮಾಜಿ ನಾಯಕ ‘ಅರ್ಜುನ’ನಿಗೆ ಖ್ಯಾತಿ ಮತ್ತು ಅಪಖ್ಯಾತಿ ಎರಡೂ ಅಂಟಿಕೊಂಡಿತ್ತು. ಈ ನಡುವೆ, ವಿನಯ, ಪ್ರಬುದ್ಧ ಆನೆಯಾಗಿ ರೂಪಾಂತರಗೊಂಡಿದ್ದು ರೋಚಕ ಕಥನ!
‘ತುಂಟ’, ‘ಮುಂಗೋಪಿ’ ಇತ್ಯಾದಿಗಳು ಅರ್ಜುನನಿಗೆ ಈ ಹಿಂದೆ ಕಟ್ಟಲಾಗಿದ್ದ ಪಟ್ಟ. ಆದರೆ, ವಾಸ್ತವವಾಗಿ ಈತ ಈ ರೀತಿ ಇರಲಿಲ್ಲ. ಕೆಲ ಘಟನೆಗಳಿಂದ ಅಂತಹ ಅಪಖ್ಯಾತಿ ಪಡೆದಿದ್ದ ಅರ್ಜುನನಿಗೆ ಸಾಮರ್ಥ್ಯವಿದ್ದರೂ ಅಂಬಾರಿ ಹೊರುವ ಹೊಣೆಯನ್ನು ನೀಡಿರಲಿಲ್ಲ. ಈ ಕಾರಣಕ್ಕೆ ‘ಬಲರಾಮ’ ಆನೆಗೂ ಮೊದಲೇ ದೊರೆಯಬೇಕಿದ್ದ ಅವಕಾಶದಿಂದ ಅರ್ಜುನ ವಂಚಿತನಾಗಿದ್ದ. ಹೀಗಾಗಿ, ದಸರಾ ವೇಳೆ ಹಲವು ವರ್ಷ ಈತ ಸಾಮಾನ್ಯ ಆನೆಯಂತೆ ಕಾರ್ಯನಿರ್ವಹಿಸಿದ್ದ.
ಕಣ್ಣಿನ ಸಮಸ್ಯೆಗೆ ತುತ್ತಾದ ಬಲರಾಮನಿಗೆ ಅನಿವಾರ್ಯವಾಗಿ ವಿಶ್ರಾಂತಿ ನೀಡಲಾಯಿತು. ಬಲರಾಮನ ಹೊಣೆಗಾರಿಕೆಯನ್ನು ಯಾರಿಗೆ ವಹಿಸಬೇಕು ಎನ್ನುವ ಚರ್ಚೆ ಎದುರಾದಾಗ ‘ಅರ್ಜುನ’ನ ಹೆಸರು ಕೇಳಿಬಂತು. ಆದರೆ, ಅವನ ಅಪಖ್ಯಾತಿಯಿಂದ ಅರಣ್ಯ ಇಲಾಖೆ ಈ ಜವಾಬ್ದಾರಿ ವಹಿಸಲು ಹಿಂದೇಟು ಹಾಕಿತ್ತು. ಬಳಿಕ ಸಶಕ್ತ ಆನೆಗಳಿಲ್ಲದ ಕಾರಣಕ್ಕೆ ಈ ಹೊಣೆ ಅರ್ಜುನನ ಹೆಗಲ ಮೇಲೆ ಅನಿವಾರ್ಯವಾಗಿ ಬಿತ್ತು.
2012ರಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತುಕೊಳ್ಳುತ್ತಿದ್ದಂತೆ ಅರ್ಜುನನ ಮೇಲಿದ್ದ ಅಪಖ್ಯಾತಿಯ ಕಾರ್ಮೋಡವೂ ಹಾಗೆಯೇ ಕರಗಿಹೋಯಿತು. ಇದರೊಂದಿಗೆ, ನಾನು ‘ಪ್ರಬುದ್ಧ’ ಆಗಿದ್ದೇನೆ ಎಂದು ಆತ ಸಾರಿದ. ಬಳಿಕ 2013, 2014, 2015… ಹೀಗೆ 2019ರ ವರೆಗೂ ಅಂಬಾರಿ ಹೊರುವ ಹೊಣೆಗಾರಿಕೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದರಿಂದ ಎಲ್ಲರ ನಂಬಿಕೆ ಗಳಿಸಿಕೊಂಡ. ಈ ಮೂಲಕ ಈತನ ಮೇಲೆ ಈ ಹಿಂದೆ ಇದ್ದ ಅನುಮಾನ ಮತ್ತು ಆತಂಕ ತೆರೆಮರೆಗೆ ಸರಿದುಹೋಯಿತು.
ಇಷ್ಟು ದೊಡ್ಡ ಹೊಣೆಗಾರಿಯನ್ನು ಸಾಮಾನ್ಯ ಆನೆ ನಿರ್ವಹಿಸಿದ್ದರೆ ಅದರಲ್ಲೇನೂ ವಿಶೇಷತೆ ಇರುತ್ತಿರಲಿಲ್ಲ. ಆದರೆ, ಕಳಂಕದ ಹಣೆಪಟ್ಟಿ ಅಂಟಿಸಿಕೊಂಡಿದ್ದ ಅರ್ಜುನ ಈ ಭಾರದ ಭರವಸೆಯ ನೊಗವನ್ನು ಇಳಿಸದೆ ಮುನ್ನಡೆಸಿ ಸೈ ಎನಿಸಿಕೊಂಡ. ಹೀಗಾಗಿ, ಈತನ ಬಗ್ಗೆ ಅಂದು ಕುಹಕದ ಮಾತುಗಳನ್ನು ಆಡುತ್ತಿದ್ದವರು ಬಳಿಕ ಪ್ರಶಂಸೆಯ ಮಾತುಗಳನ್ನು ಆಡುತ್ತಿದ್ದರು.
ಮೊದಲಿಂದಲೂ ಎಲ್ಲ ಆನೆಗಳಂತೆ ಅರ್ಜುನ ಕೂಡ ತುಸು ತುಂಟನೇ. ವಯಸ್ಸಾಗುತ್ತಿದಂತೆ ಈ ನಡವಳಿಕೆ ಕಡಿಮೆ ಆಯಿತು. ಆದರೆ, ಈತ ಯಾರಿಗೂ ತೊಂದರೆ ನೀಡುತ್ತಿರಲಿಲ್ಲ ಎಂಬ ಮಾತು ಮಾವುತರು, ಕಾವಾಡಿಗರ ವಲಯದಲ್ಲಿ ಕೇಳಿಬರುತ್ತದೆ.
ಮಾವುತರ ನಿಶಾನೆಯನ್ನು ಅರ್ಜುನ ಚಾಚೂತಪ್ಪದೆ ಪಾಲಿಸುತ್ತಿದ್ದ. ಸಣ್ಣಪ್ಪ, ಕುಸಾ, ದೊಡ್ಡ ಮಾಸ್ತಿ ಎಂಬ ಮಾವುತರು ಇದನ್ನು ನೋಡಿಕೊಂಡಿದ್ದರು. 16 ವರ್ಷಗಳ ಕಾಲ ದೊಡ್ಡ ಮಾಸ್ತಿ ಈತನನ್ನು ಆರೈಕೆ ಮಾಡಿದ್ದರು. ಅವರ ನಿಧನದ ಬಳಿಕ ಈ ಹೊಣೆಗಾರಿಕೆ ಅವರ ಮಗ ಸಣ್ಣಪ್ಪನಿಗೆ ವರ್ಗಾವಣೆಯಾಗಿತ್ತು. ಇವರು ಒಂದು ವರ್ಷ ಇದಕ್ಕೆ ಮಾವುತರಾಗಿದ್ದರು. ಪ್ರಸ್ತುತ ಮಾವುತ ವಿನು, ಕಾವಾಡಿ ಡಿ.ರಾಜ ಈ ಆನೆಯನ್ನು ಪಾಲನೆ-ಪೋಷಣೆ ಮಾಡುತ್ತಿದ್ದರು.
1968ರಲ್ಲಿ 15 ವರ್ಷ ವಯೋಮಾನದಲ್ಲಿ ಇದ್ದಾಗ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ವಿಧಾನದಲ್ಲಿ ಅರ್ಜುನನ್ನು ಸೆರೆ ಹಿಡಿಯಲಾಗಿತ್ತು. 22 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿತ್ತು. ‘ಅರ್ಜುನ’ ಎಲ್ಲರ ೇವರೆಟ್ ಆಗಿ ಹೊರಹೊಮ್ಮಿತ್ತು.
ಎಚ್.ಡಿ.ಕೋಟೆ ತಾಲೂಕಿನ ಬಳ್ಳೆ ಆನೆ ಶಿಬಿರದ ನಿವಾಸಿಯಾದ ಈ ಆನೆ 5800 ರಿಂದ 6000 ಕೆಜಿ ತೂಕವಿತ್ತು. 3.75 ಮೀಟರ್ ಉದ್ದ, 2.98 ಮೀಟರ್ ಎತ್ತರವಿತ್ತು. 2012ರಿಂದ 2019 ರವರೆಗೆ ಅಂಬಾರಿ ಹೊತ್ತು ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿತ್ತು. 2023ರ ದಸರಾದಲ್ಲಿ ನಿಶಾನೆ ಆನೆಯಾಗಿ ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿತ್ತು.
60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಕಾರ್ಯದಿಂದ 2020ರಲ್ಲಿ ನಿವೃತ್ತಿಯಾಗಿತ್ತು. ನಂತರವೂ ಇದು ಪುಂಡಾನೆ, ಹುಲಿ, ಚಿರತೆಗಳ ಸೆರೆ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿ ಇರುತ್ತಿತ್ತು. ಇದೀಗ ಇಂತಹ ಕಾರ್ಯಾಚರಣೆಯಲ್ಲೇ ಅರ್ಜುನ ಕೊನೆಯುಸಿರೆಳೆದಿದ್ದಾನೆ.
ಅರ್ಜುನ ಆನೆಯ ಅಕಾಲಿಕ ಸಾವು ಅರಣ್ಯ ಇಲಾಖೆ, ಆನೆ ಕ್ಯಾಂಪ್ ಸಿಬ್ಬಂದಿ ಮಾತ್ರವಲ್ಲದೆ, ದಸರಾ ಮಹೋತ್ಸವ ಕಣ್ತುಂಬಿಕೊಂಡಿದ್ದ ಲಕ್ಷಾಂತರ ಜನರಿಗೂ ನೋವುಂಟು ಮಾಡಿದೆ. ಅರ್ಜುನನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆತನ ಭಾವಚಿತ್ರ ಹಾಕಿ ಆತ್ಮಕ್ಕೆ ಶಾಂತಿ ಕೋರುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಸತತ 8 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತು ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು, ಜನರ ಪ್ರೀತಿಗೆ ಪಾತ್ರವಾಗಿದ್ದ ಆನೆ ಅರ್ಜುನ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು. ಬರೋಬ್ಬರಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಸಂಗತಿ ಕೇಳಿ ಬಹಳ ನೋವುಂಟಾಯಿತು. ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ. ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವಿಗೀಡಾಗಿರುವುದು ಅತ್ಯಂತ ದುಃಖದ ಸಂಗತಿ. ಕಾಡಾನೆಗಳನ್ನು ಸೆರೆ ಹಿಡಿಯುವಾಗ ತಮ್ಮ ಪ್ರಾಣ ರಕ್ಷಣೆಯ ಜತೆಗೆ, ವನ್ಯಮೃಗಗಳ ಜೀವಕ್ಕೂ ಹಾನಿ ಆಗದಂತೆ ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಲಿ. ಅರ್ಜುನನ ಆತ್ಮಕ್ಕೆ ಚಿರಶಾಂತಿ ಸಿಗಲಿ. ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ.
ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ