ಗೃಹಲಕ್ಷ್ಮೀಗೆ ಎಸ್‌ಎಂಎಸ್ ಕಟಾಕ್ಷವಿಲ್ಲ

gruhalakshmi story
Published on

ಕುಟುಂಬದ ಯಜಮಾನಿಯರ ಪರದಾಟ

ಕೇಂದ್ರಗಳಲ್ಲಿ ಮುಗಿಬಿದ್ದ ಜನ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಗೆ 2 ಸಾವಿರ ರೂ. ಪಾವತಿಸುವ ಗೃಹಲಕ್ಷ್ಮೀ ಯೋಜನೆಗೆ ಮೊಬೈಲ್‌ನಲ್ಲಿ ಬರಬೇಕಾದ ಎಸ್‌ಎಂಎಸ್ ತೊಡಕಾಗಿದೆ ಪರಿಣಮಿಸಿದೆ.
ಜು.20ರಿಂದ ನೋಂದಣಿ ಮಾಡಿಕೊಳ್ಳಲು ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮುಗಿಬಿದ್ದಿರುವ ಕುಟುಂಬದ ಯಜಮಾನಿಯರಿಗೆ ಲಕ್ಷ್ಮೀ ಕಟಾಕ್ಷ ದೊರೆಯುತ್ತಿಲ್ಲ. ಯೋಜನೆಗೆ ಚಾಲನೆ ದೊರೆತ ಮೊದಲ ದಿನವೇ ತಾಂತ್ರಿಕ ದೋಷದ ಕಾರಣ ಮೊಬೈಲ್‌ಗಳಿಗೆ ಎಸ್‌ಎಂಎಸ್ ಸಂದೇಶ ಬರದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾಗುತ್ತಿರುವ ದೃಶ್ಯಗಳು ಕಂಡುಬಂದಿವೆ.
ಪ್ರಕ್ರಿಯೆಗೆ ತೊಡಕು: ಪಡಿತರ ಚೀಟಿಗಳ ಡೇಟಾ ಆಧರಿಸಿ ನೋಂದಣಿಗೆ ದಿನಾಂಕ ಹಾಗೂ ಸಮಯ ನಿಗದಿಪಡಿಸಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಯಾವ ಕೇಂದ್ರಕ್ಕೆ ಯಾವ ದಿನಾಂಕ, ಯಾವ ಸಮಯಕ್ಕೆ ನೋಂದಣಿ ಮಾಡಿಸಲು ಹೋಗಬೇಕು ಎಂಬ ಸಂದೇಶ ಬರುತ್ತದೆ. ಈ ಸಂದೇಶ ಬರದೆ ಯಾವುದೇ ಪ್ರಕ್ರಿಯೆ ಸಾಧ್ಯವಿಲ್ಲದಂತಾಗಿದೆ. ಪ್ರತಿ ಫಲಾನುಭವಿಯ ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 814750 0500 ನಂಬರ್‌ಗೆ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದಾಗಿದೆ. ಆದರೆ ಈ ಸಂದೇಶವೇ ಬರದೆ ಎಲ್ಲವೂ ಅಯೋಮಯವಾಗಿದೆ.

ಬರಿಗೈನಲ್ಲಿ ವಾಪಸ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಫಲಾನುಭವಿಗಳು 103 ಗ್ರಾಮ ಒನ್ ಕೇಂದ್ರಗಳಲ್ಲಿ, 3 ಕರ್ನಾಟಕ ಒನ್ ಕೇಂದ್ರಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿರುವ 101 ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ 23 ನಗರ ಪ್ರದೇಶದ ನೋಂದಣಿ ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಲಾನುಭವಿಗಳು ಯಾವ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬೇಕು ಎಂಬ ಬಗ್ಗೆ ಅವರ ಮೊಬೈಲ್‌ಗೆ ಕೇಂದ್ರದ ಮಾಹಿತಿಯ ಎಸ್‌ಎಂಎಸ್ ಬರುವ ವ್ಯವಸ್ಥೆ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಕಂಪ್ಯೂಟರ್ ಆಪರೇಟರ್‌ಗಳು ನೋಂದಣಿ ಬಳಿಕ ಎಸ್‌ಎಂಎಸ್ ಕೇಳುತ್ತಾರೆ. ಆದರೆ ಲಾನುಭವಿಗಳ ಮೊಬೈಲ್‌ಗೆ ಎಸ್‌ಎಂಎಸ್ ಬರುತ್ತಿಲ್ಲ ಎಂಬ ದೂರು ಕೇಳಿಬರುತ್ತಿದ್ದು, ಯೋಜನೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ವ್ಯಕ್ತವಾಗಿದೆ. ಯಜಮಾನಿ ಹಾಗೂ ಯಜಮಾನಿ ಪತಿಯ ಆಧಾರ್‌ಕಾರ್ಡ್ ಸಂಖ್ಯೆ ಹಾಗೂ ಲಾನುಭವಿಯ ಬ್ಯಾಂಕ್ ಖಾತೆಯ ಸಂಖ್ಯೆ ಲಿಂಕ್ ಮಾಡಬೇಕಿದೆ. ಇವೆಲ್ಲ ಪ್ರಕ್ರಿಯೆಗೆ ಎಸ್‌ಎಂಎಸ್ ತೊಡಕಾಗಿದೆ.
ಕೇಂದ್ರದಲ್ಲೇ ಮಂಜೂರಾತಿ ಪತ್ರ: ನಿಗದಿತ ಸಮಯಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಅದೇ ಕೇಂದ್ರಕ್ಕೆ ಮುಂದಿನ ಯಾವುದೇ ದಿನಗಳಲ್ಲಿ ಸಂಜೆ 5 ಗಂಟೆ ನಂತರ ತೆರಳಿ ನೋಂದಾಯಿಸಿಕೊಳ್ಳಬಹುದು. ನಿಗದಿತ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸಿದಾಗ ಅನುಮೋದಿಸಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಕೇಂದ್ರದಲ್ಲೇ ನೀಡಲಾಗುವುದು, ಪ್ರಜಾ ಪ್ರತಿನಿಧಿಗಳ ಮೂಲಕ ನೋಂದಾಯಿಸಿದರೆ ಮಂಜೂರಾತಿ ಪತ್ರವನ್ನು ನಂತರ ಪ್ರಜಾ ಪ್ರತಿನಿಧಿಗಳ ಮೂಲಕ ತಲುಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net