

ಬೆಳಗಾವಿ : ಫಲಾನುಭವಿಗಳ ಬ್ಯಾಂಕ್ ಖಾತೆ ನಿಷ್ಕ್ರೀಯಗೊಂಡಿದ್ದರಿಂದಲೇ ಸದ್ಯ ಗೃಹಲಕ್ಷ್ಮಿ ಯೋಜನೆಯಡಿ 7-8 ಲಕ್ಷ ಕುಟುಂಬಗಳ ಯಜಮಾನಿಯರಿಗೆ ಹಣ ಜಮೆ ಮಾಡುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅಂಥವರ ಪಟ್ಟಿ ಮಾಡಲಾಗಿದ್ದು, ತಮ್ಮ ಬ್ಯಾಂಕ್ ಖಾತೆ ಸಕ್ರೀಯಗೊಳಿಸುವ ಮೂಲಕ ತಾಂತ್ರಿಕ ಲೋಪ ಸರಿಪಡಿಸಿಕೊಂಡು ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಂದು ಕೋಟಿಗೂ ಅಧಿಕ ಫಲಾನುಭವಿಗಳಿದ್ದು, ಈವರೆಗೆ ಒಟ್ಟು 59 ಲಕ್ಷ ಫಲಾನುಭವಿಗಳಿಗೆ ತಲಾ ಎರಡು ಸಾವಿರ ರೂ.ಜಮೆ ಮಾಡಲಾಗಿದೆ. ಶನಿವಾರದೊಳಗೆ ಉಳಿದೆಲ್ಲ ಫಲಾನುಭವಿಗಳಿಗೂ ಪಾವತಿಯಾಗಲಿದೆ ಎಂದರು.
ಇನ್ನು ‘ಸದಾ ಒಂದಿಲ್ಲೊಂದು ಬೆಳವಣಿಗೆ ನಡೆಯುವ ಉಡುಪಿ ಜಿಲ್ಲೆಯ ಉಸ್ತುವಾರಿ ಜತೆಗೆ ಗೃಹ ಲಕ್ಷ್ಮಿ ಯೋಜನೆ ಇಡೀ ರಾಜ್ಯದ ಬಹುದೊಡ್ಡ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಜಿಲ್ಲಾ ರಾಜಕಾರಣದಲ್ಲಿ ಯಾರೊಂದಿಗೂ ಕೋಲ್ಡ್‌ವಾರ್-ಹಾಟ್‌ವಾರ್ ಇಲ್ಲವೇ ಇಲ್ಲ. ಹಿರಿಯರಾದ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿಯೇ ಎರಡು ವಿಧಾನ ಪರಿಷತ್ ಸ್ಥಾನ ಗೆದ್ದಿದ್ದೇವೆ. ಅಲ್ಲದೇ, ವಿಧಾನ ಸಭೆ ಚುನಾವಣೆಯಲ್ಲೂ ಅವರ ಮಾರ್ಗದರ್ಶನದಿಂದಲೇ ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯಲು ಸಾಧ್ಯವಾಗಿದೆ. ಈಗಲೂ ಭೇಟಿಯಾದಗಲೆಲ್ಲ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತಿರುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯನ್ನೂ ಅವರ ನೇತೃತ್ವದಲ್ಲಿಯೇ ಎದುರಿಸಲಾಗುವುದು’ ಎಂದು ತಿಳಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮೃಣಾಲ ಹೆಬ್ಬಾಳ್ಕರ್ ಅವರು, ಸ್ಪರ್ಧಿಸುತ್ತಾರೆ ಎಂಬ ಚರ್ಚೆ ನಡೆಯುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಹೆಬ್ಬಾಳ್ಕರ್, ‘ಜಿಲ್ಲೆಯ ಸಚಿವರು, ಮುಖಂಡರು, ರಾಜ್ಯ ನಾಯಕರು ಸೇರಿದಂತೆ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ನಾನು ಪಾಲ್ಗೊಳ್ಳಲು ಅಸಾಧ್ಯವಾದ ಸಂದರ್ಭದಲ್ಲಿ ಸಚಿವರ ಪುತ್ರನಾಗಿ ಮೃನಾಲ್ ಹಾಜರಿಗರಬಹುದು ಅದನ್ನೇ ಲೋಕಸಭೆಗೆ ತಯಾರಿ ಎನ್ನುವುದು ಸಮಂಜಸವಲ್ಲ ಎಂದು ಪ್ರತಿಕ್ರಿಯಿಸಿದರು.